ಚಿತ್ರದುರ್ಗ : ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಒಳ ಮೀಸಲಾತಿ ನೀಡುವುದಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ನಾಗಮೋಹನ್ದಾಸ್ ಆಯೋಗ ದತ್ತಾಂಶ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಛಲವಾದಿ ಜನಾಂಗದ ನಿಖರವಾದ ಸಂಖ್ಯೆಯನ್ನು ತೋರಿಸದೆ ನಮಗೆ ಅನ್ಯಾಯವೆಸಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಛಲವಾದಿ ಸಮಾಜದ ಮುಖಂಡ ಹೆಚ್.ಸಿ.ನಿರಂಜನಮೂರ್ತಿ ಆಪಾದಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಛಲವಾದಿ ಸಮುದಾಯ ಐವತ್ತರಿಂದ ಅರವತ್ತು ಸಾವಿರದಷ್ಟಿದೆ. ಮನೆ ಮನೆ ಸಮೀಕ್ಷೆ ಸಂದರ್ಭದಲ್ಲಿ ಕೇವಲ ಎರಡು ಸಾವಿರ ನೊಂದಣಿಯಾಗಿರುವುದು ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ. ದತ್ತಾಂಶ ಸಂಗ್ರಹದಲ್ಲಿ ಲೋಪವಾಗಿದೆ. ಛಲವಾದಿ ಸಮಾಜಕ್ಕೆ ಸೇರಿದ ಕೆಲವರನ್ನು ಪರ್ಯಾಯವೆಂದು ಬೇರ್ಪಡಿಸಿ ಶೇ. ಒಂದರಷ್ಟು ಮೀಸಲಾತಿ ನೀಡುವುದು ಸರಿಯಲ್ಲ. ಮಾಹಿತಿ ಸಂಗ್ರಹಿಸುವಲ್ಲಿ ಆಯೋಗ ತಪ್ಪು ಹೆಜ್ಜೆ ಇಟ್ಟಿದೆ. ಸಮೀಕ್ಷೆಯನ್ನು ಮರು ಪರಿಶೀಲಿಸಿ ನಮಗೆ ನ್ಯಾಯ ದೊರಕಿಸುವಂತೆ ಹೆಚ್.ಸಿ.ನಿರಂಜನಮೂರ್ತಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಸಮೀಕ್ಷೆಯ ಪ್ರಾರಂಭದಲ್ಲಿ ಪ್ರತಿ ಗಣತಿದಾರರಿಗೆ ಟ್ಯಾಬ್ಗಳನ್ನು ನೀಡದ ಕಾರಣ ಶಿಕ್ಷಕರಲ್ಲಿ ಗುಣ ಮಟ್ಟದ ಮೊಬೈಲ್ಗಳು ಇಲ್ಲದಿರುವುದರಿಂದ ಆಪ್ ಡೌನ್ಲೋಡ್ ಆಗದೆ ಸಮೀಕ್ಷೆ ಪ್ರಾರಂಭವಾಗಲಿಲ್ಲ. ಗುಣಮಟ್ಟದ ಮೊಬೈಲ್ಗಳನ್ನು ಹೊಂದಿರುವ ಕೆಲವರು ಮಾತ್ರ ಸಮೀಕ್ಷೆ ನಡೆಸಿ ಸಾವಿರಾರು ಕುಟುಂಬಗಳ ಮಾಹಿತಿ ಸಂಗ್ರಹಿಸಿದ ನಂತರವೂ ಆಯೋಗ ಆಪ್ನ್ನು ಅನ್ಇನ್ಸಾಟಲ್ ಮಾಡಲು ಸೂಚಿಸಿತು. ಇದರಿಂದ ಸಮೀಕ್ಷೆ ಪೂರ್ಣಗೊಳಿಸಿದ್ದ ಸಾವಿರಾರು ಕುಟುಂಬಗಳ ಅಂಕಿ ಅಂಶಗಳು ರದ್ದಾಯಿತು. ಹಾಗಾಗಿ ನಾನಾ ರೀತಿಯ ಗೊಂದಲಗಳು ಕಾಡುತ್ತಿರುವುದನ್ನು ಸರಿಪಡಿಸಬೇಕೆಂದರು.
ನ್ಯಾಯವಾದಿಗಳಾದ ಹೆಚ್.ಅಣ್ಣಪ್ಪಸ್ವಾಮಿ, ಶಶಾಂಕ್, ಛಲವಾದಿ ಸಮಾಜದ ಎಸ್.ಎನ್.ರವಿಕುಮಾರ್, ರಂಗಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.