ನವದೆಹಲಿ: ಬುಧವಾರ ನಸುಕಿನಲ್ಲಿ ಉಗ್ರರ ಮೇಲೆ ದಾಳಿ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆಯನ್ನು ಕರೆದಿದ್ದರು. ಇದೀಗ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ಮೂರು ಪಡೆಗಳ ಮುಖ್ಯಸ್ಥರು, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ಮೋದಿ ಸೇನಾ ಪಡೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ್ ನಡೆಸಿದ ನಂತರ ಎಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಸೇನಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದ ಮೋದಿ, ನಮ್ಮವರ ಹತ್ಯೆ ಮಾಡಿದವರನ್ನು ಸಮಯ, ಸಂದರ್ಭ, ನೋಡಿ ಹೊಡೆಯಿರಿ ಎಂದು ಹೇಳಿದ್ದರು. ಇದೀಗ ಪಾಕಿಸ್ತಾನದ ನೆಲದಲ್ಲಿ ಇರುವ ಉಗ್ರರ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಪ್ರಧಾನಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಹೊಸ ಭಾರತ ಎಂದು ಪ್ರಧಾನಿ ತಮ್ಮ ಸಚಿವರಿಗೆ ಹೇಳಿದರು. 25 ನಿಮಿಷಗಳ ಕಾಲ ನಡೆದ ಕ್ಷಿಪ್ರ ಮತ್ತು ಸಂಘಟಿತ ಕ್ಷಿಪಣಿ ದಾಳಿಯಲ್ಲಿ ನಿಷೇಧಿತ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗಳಿಗೆ ಸೇರಿದ ನೆಲೆ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಮಸೂದ್ ಅಝರ್‌ನ ಸಹೋದರಿ ಸೇರಿದಂತೆ ಆತನ 14 ಕುಟುಂಬಸ್ಥರು ಹತರಾಗಿದ್ದರೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ 100 ಕ್ಕೂ ಅಧಿಕ ಮಂದಿ ಮೃತಪಟ್ಟಿರಬಹುದು ಎಂದು ಮೂಲಗಳು ತಿಳಿಸಿವೆ. ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಭಾರತದ ಕ್ಷಿಪಣಿ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 46 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ತಿಳಿಸಿದೆ.
ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಮತ್ತು ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ನಮ್ಮ ಗುರಿ ನಿಖರವಾಗಿದೆ. ಯಾವುದೇ ನಾಗರಿಕ ಪ್ರದೇಶದಲ್ಲಿ ದಾಳಿ ನಡೆಸಿಲ್ಲ ಹಾಗೂ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದೆ. ಪಾಕಿಸ್ತಾನ ಸರ್ಕಾರ ಈ ದಾಳಿಯನ್ನು ಖಂಡಿಸಿದ್ದು, ಮತ್ತೊಮ್ಮೆ ಜಾಗತಿಕವಾಗಿ ಛೀಮಾರಿ ಹಾಕಿಸಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ತರಾಟಗೆ ತೆಗೆದಕೊಂಡಿದ್ದಾರೆ. ಇತ್ತ ಪಾಕಿಸ್ತಾನದ ಆಪ್ತಮಿತ್ರ ಚೀನಾ ಶಾಂತಿ ಮಂತ್ರವನ್ನು ಪಠಿಸುತ್ತಿದೆ.