ಚಿತ್ರದುರ್ಗ: ಮಂತ್ರಿಮಂಡಲದ ಸಭೆಯಲ್ಲಿ ಕರ್ನಾಟಕ ಸರ್ಕಾರ 56432 ಹುದ್ದೆಗಳ ಭರ್ತಿಗೆ ಮುಂದಿನ 30 ದಿನಗಳಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಪ್ರಕಟಿಸಿದೆ. ಆದರೆ ಈ ಪ್ರಕ್ರಿಯೆಯನ್ನು ಶೇ 56 ರ ಮೀಸಲಾತಿಯನ್ನು ಹೊರಗಿಟ್ಟು ಮಾಡುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ಘೋರ ಅನ್ಯಾಯ ವಾಗಿದೆ. ಸರ್ಕಾರ ಈ ಹಿಂದಿನ ಮಾದರಿಯಲ್ಲಿಯೇ ನೇಮಕಾತಿಯನ್ನು ಮಾಡಬೇಕು ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟವನ್ನು ಮಾಡಲಾಗುವುದೆಂದು ಸರ್ಕಾರಕ್ಕೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸರ್ಕಾರದ ಇತ್ತೀಚಿನ ನಿರ್ಧಾರಗಳು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿನ ಗೊಂದಲಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಎಸ್ಟಿ ಮೀಸಲಾತಿಯ ವರ್ಗೀಕರಣಕ್ಕಾಗಿ ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸುವಾಗ ಶೇ 56 ಮೀಸ ಲಾತಿಯೇ ಇತ್ತು. ಸರ್ಕಾರ ಒಳಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಶೇ56 ರ ಮೀಸಲಾತಿಯೇ ಇತ್ತು. ಈಗ ಏಕಾಏಕಿ ಶೇ 56 ರ ಮೀಸಲಾತಿಯನ್ನು ಶೇ 50ಕ್ಕೆ ಇಳಿಸುವಾಗ ಇಡೀ ಪರಿಶಿಷ್ಟವರ್ಗದ ನಾಯಕರನ್ನು, ಹೋರಾಟಗಾರರನ್ನು ಕತ್ತಲಲ್ಲಿ ಇರಿಸಲಾಗಿದೆ ಎಂದ ಅವರು, ಅರ್ಥಿಕವಾಗಿ ದಿವಾಳಿಯಾಗಿರುವ ಸಿದ್ಧರಾಮಯ್ಯನವರ ಸರ್ಕಾರ ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ಅನೇಕ ಇಲಾಖೆಗಳ ಉದ್ಯೋಗಿಗಳಿಗೆ ತಿಂಗಳ ಸಂಬಳ ಕೊಡಲಾಗದೆ ಪರದಾಡುತ್ತಿದೆ .
ಸಾರಿಗೆ, ಆರೋಗ್ಯ ಇಲಾಖೆಯ ನೌಕಾರರಿಗೆ ಪಾವತಿಸ ಬೇಕಾದ ಬಾಬಿನಲ್ಲಿ ನೂರಾರು ಕೋಟಿ ರೂಗಳನ್ನು ಬಾಕಿ ಉಳಿಸಿಕೊಂಡಿದೆ. ತನ್ನ ಎಡವಟ್ಟುಗಳನ್ನು ಮತ್ತು ದಿವಾಳಿಯಾದ ಖಜಾನೆಯನ್ನು ಮುಚ್ಚಿಕೊಳ್ಳಲು’ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿ ವಿದ್ಯಾರ್ಥಿ, ಯುವಜನರ ಕನಸು, ನಿರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ ರಾಜ್ಯ ಸರ್ಕಾರ ಪ್ರಕಟಿಸಿರುವ 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ಶೇ. 56ರ ಮೀಸಲಾತಿಯನ್ನು ಕಡೆಗಣಿಸಿ, ಶೇ. 50ಕ್ಕೆ ಇಳಿಸಿರುವುದು ಘೋರ ಅನ್ಯಾಯ ಎಂದು ದೂರಿದರು.
ಎಸ್.ಟಿ. ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಕುಮಾರ್ ಮಾತನಾಡಿ, 2022 ರಿಂದ ಕರ್ನಾಟಕದಲ್ಲಿ ಎಸ್.ಸಿ. 17% ಮತ್ತು ಎಸ್,ಟಿ. 7% ಮೀಸಲಾತಿ ಜಾರಿಯಲ್ಲಿದೆ. ಸತತ ಮೂರು ವರ್ಷ ಸಿ.ಇ.ಟಿ, ನೀಟ್ ಪರೀಕ್ಷೆಗಳೂ ಸೇರಿದಂತೆ ಸಾವಿರಾರು ನೇಮಕಾತಿಗಳು ಶೇ 56 ರ ಮೀಸಲಾತಿ ಪ್ರಮಾಣದಲ್ಲಿ ಸುಗಮವಾಗಿ ನೆಡೆದಿದೆ. ಆದರೆ ಈಗ ಸರ್ಕಾರ ಮೀಸಲಾತಿಯನ್ನು ಶೇ.50ಕ್ಕೆ ಇಳಿಸಿ ಸಾವಿರಾರು ಜನರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. 2025ರ ಅಕ್ಟೋಬರ್ನಲ್ಲಿ ಹೈಕೋರ್ಟ್ ಶೇ. 56ರ ಮೀಸಲಾತಿಗೆ ಮಧ್ಯಂತರ ತಡೆ ನೀಡಿರುವುದು ನಿಜ. ಆದರೆ, ಸರ್ಕಾರ ನ್ಯಾಯಾಲಯದಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜಾರ್ಖಂಡ್ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ. 50 ದಾಟಿದ್ದರೂ ಅಲ್ಲಿನ ಸರ್ಕಾರಗಳು ಅದನ್ನು ಊರ್ಜಿತಗೊಳಿಸಿವೆ. ಇಲ್ಲಿನ ಸರ್ಕಾರಕ್ಕೆ ಅಂತಹ ಬದ್ಧತೆ ಇಲ್ಲದಂತಾಗಿದೆ,” ಎಂದು ಕಿಡಿಕಾರಿ ಸರ್ಕಾರದ ಈ ಬೇಜವಾಬ್ದಾರಿ ನಡೆಯಿಂದಾಗಿ ಸುಮಾರು 4,000ಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಯುವಜನರು ಉದ್ಯೋಗಾವಕಾಶದಿಂದ ವಂಚಿತರಾಗಲಿದ್ದಾರೆ ಬಸವರಾಜ ಬೊಮ್ಮಾಯಿ ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಶೇ.3 ರಿಂದ 7 ಕ್ಕೆ ಹೆಚ್ಚಿಸಿದರು. ಬೇರೆ ಬೇರೆ ರಾಜ್ಯಗಳಲ್ಲಿ ಶೇ.50ರ ಗಡಿದಾಟಿದೆ. ಆದರೆ, ಇಲ್ಲಿನ ನ್ಯಾಯಾಲಯದಲ್ಲಿ ಸರಿಯಾಗಿ ದಾಖಲಾತಿ ಸಲ್ಲಿಸದೆ ಪರಿಶಿಷ್ಟ ಜಾತಿಗಳಿಗೆ ಮೋಸ ಮಾಡಲು ಮುಂದಾಗಿದ್ದಾರೆ ಎಂದರು.
ಬಿಜೆಪಿ ಮುಖಂಡರು, ಎಸ್.ಟಿ.ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಮಾಜಿ ಸದಸ್ಯರಾದ ಪಾಪೇಶ ನಾಯಕ ಮಾತನಾಡಿ, ರಾಜನಹಳ್ಳಿ ವಾಲ್ಮೀಕಿ ಶ್ರೀಗಳು ಮೀಸಲಾತಿಗಾಗಿ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿ 250 ದಿನ ಸತ್ಯಾಗ್ರಹ ನಡೆಸಿದ್ದಾರೆ. ಈ ವೇಳೆ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ ಜೇನುಗೂಡಿಗೆ ಕೈ ಹಾಕಿ ಮೀಸಲಾತಿ ಜಾರಿ ಮಾಡಿದೆ. ಈಗ ಮೀಸಲಾತಿಯಲ್ಲಿ ಅನ್ಯಾಯ ಮಾಡಿ ಹುದ್ದೆ ಭರ್ತಿ ಮಾಡಿದರೆ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಲಿದೆ. ಇದರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ತನ್ನ ಆರ್ಥಿಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಸರ್ಕಾರ ಮೀಸಲಾತಿ ಗೊಂದಲ ಸೃಷ್ಟಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಸುಗಮವಾಗಿ ನಡೆಯುತ್ತಿದ್ದ ಶೇ. 56ರ ಮೀಸಲಾತಿಯನ್ನು ಏಕಾಏಕಿ ಬದಲಿಸುವ ಮೂಲಕ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಸರ್ಕಾರ ಅಹಂಕಾರ ಬಿಟ್ಟು ತಕ್ಷಣವೇ ಸರ್ವಪಕ್ಷಗಳ ಪ್ರಮುಖರು, ಕಾನೂನು ತಜ್ಞರು ಮತ್ತು ಹೋರಾಟಗಾರರ ಸಭೆ ಕರೆದು ಚರ್ಚಿಸಬೇಕು. ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಮತ್ತು ಮಸೂದೆಯ ಆಶಯಕ್ಕೆ ವಿರುದ್ಧವಾಗಿ ಸಂಪುಟ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಸಾಂವಿಧಾನಿಕ ಮೀಸಲಾತಿಯನ್ನು ಉಳಿಸಿಕೊಳ್ಳಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ 2022ರಿಂದ ಜಾರಿಯಲ್ಲಿದ್ದ ಶೇ. 17 (Sಅ) ಮತ್ತು ಶೇ. 7 (Sಖಿ) ಮೀಸಲಾತಿಯನ್ನು ಕತ್ತರಿಸುವ ಮೂಲಕ ಈ ಸರ್ಕಾರ ದಲಿತ ಮತ್ತು ಹಿಂದುಳಿದ ವರ್ಗಗಳ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದರು.
ಚಿತ್ರದುರ್ಗ ಎಸ್.ಟಿ. ಮೋರ್ಚಾದ ಅಧ್ಯಕ್ಷಚರಾಧ ರಾಜು ಮಾತನಾಡಿ, ಈಗ ಸರ್ಕಾರ ಭರ್ತಿ ಮಾಡಲು ಹೊರಟಿರುವ 53 ಸಾವಿರ ನೇಮಕಾತಿಯಲ್ಲಿ ಸರ್ಕಾರದ ಬೇಜವಾಬ್ದಾರಿ ನೆಡೆಯಿಂದ ನಾಲ್ಕು ಸಾವಿರಕ್ಕೂ ಮಿಕ್ಕ Sಅ, Sಖಿ ಯುವಜನರಿಗೆ ಅನ್ಯಾಯವಾಗಲಿದೆ. ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಸರಿಯಾದ ಸ್ಪಷ್ಟನೆ ಕೊಡಲಿಲ್ಲ. ಈಗ ರಾಜ್ಯಪಾಲರು ಸಹಿ ಹಾಕಿದ ಮಸೂದೆಯ ಆಶಯಕ್ಕೂ, ಸಚಿವ ಸಂಪುಟದ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಆಗಿದೆ ಸರ್ಕಾರ ತನ್ನ ಅಹಂಕಾರ ಪ್ರದರ್ಶಿಸುವುದನ್ನು ನಿಲ್ಲಿಸಲಿ, ಸರ್ವಪಕ್ಷಗಳ ಪ್ರಮುಖರ ಸಭೆ ಕರೆದು ಚರ್ಚಿಸಲಿ. ಹೋರಾಟಗಾರರ, ಕಾನೂನು ತಜ್ಞರ ಸಭೆ ಕರೆದು ಚರ್ಚಿಸಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಾಳೆಕಾಯಿ ರಾಮದಾಸ್, ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ, ಜಿಲ್ಲಾ ಕಾರ್ಯದರ್ಶಿ ಪಾಲಯ್ಯ, ವಕ್ತಾರ ನಾಗರಾಜ್ ಬೇದ್ರೆ ಗ್ರಾಮಾಂತರ ಎಸ್.ಟಿ. ಅಧ್ಯಕ್ಷ ಬಾಬು, ಉಪಸ್ಥಿತರಿದ್ದರು.































