ಚಿತ್ರದುರ್ಗ: ರಚನಾತ್ಮಕ ಹೋರಾಟಗಳಿಂದ ಮಾತ್ರ ಸಾಮಾನ್ಯ ಜನರು ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿಕೊಡಬೇಕಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ನಗರದ ಲೀಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತ ನಾಯಕ ನುಲೇನೂರು ಶಂಕರಪ್ಪ ಪ್ರತಿಷ್ಥಾನ ಏರ್ಪಡಿಸಿದ್ದ ಹಸಿರು ಪ್ರಶಸ್ತಿ ಪುರಸ್ಕಾರ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿನಾಥನ್ ವರದಿ ಜಾರಿ ಮಾಡದ ಕಾರಣಕ್ಕೆ ಕಳೆದ ಒಂಭತ್ತು ವರ್ಷಗಳಲ್ಲಿ ರೈತರು, ಸಾಮಾನ್ಯ ಜನರು ಹಾಗೂ ಕಾರ್ಮಿಕರಿಗೆ ಇಪ್ಪತ್ತ ನಾಲ್ಕು ಲಕ್ಷ ಕೋಟಿ ನಷ್ಟವಾಗಿದೆ. ಪ್ರಸಕ್ತ ವರ್ಷದಲ್ಲಿ ಮೂರು ಲಕ್ಷ ಕೋಟಿ ನಷ್ಟವಾಗಿದೆ ಎಂದು ವಿಷಾದಿಸಿದರು.
ಭಾರತಕ್ಕೆ ಬ್ರಿಟಿಷರು ಬರುವ ಮೊದಲು ಪ್ರಪಂಚದಲ್ಲೇ ಅತಿ ಹೆಚ್ಚು ಜಿಡಿಪಿ ಇದ್ದ ದೇಶ ನಮ್ಮದು. ಆಗಿನ ಕಾಲಘಟ್ಟದಲ್ಲಿ ಹಳ್ಳಿಗಳಲ್ಲಿ ಗುಡಿ ಕೈಗಾರಿಕೆಗಳು ಇದ್ದವು. ಈಗ ಇವೆಲ್ಲಾ ನಾಶವಾಗಿವೆ. ಆದ್ದರಿಂದ ಬದುಕು ಕಟ್ಟಿಕೊಡುವುದನ್ನು ಇಂದಿನ ಹೋರಾಟಗಾರರು ಜನರಿಗೆ ಕಲಿಸಿಕೊಡಬೇಕಾಗಿದೆ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಎಂಭತ್ತರ ದಶಕದಲ್ಲಿ ಇದ್ದಂತಹ ಹೋರಾಟದ ಸ್ಫೂರ್ತಿ ಪ್ರಸ್ತುತ ಕಾಲದಲ್ಲಿ ಇಲ್ಲವಾಗಿದೆ. ಹೆಚ್ಚು ಹೆಚ್ಚು ಯುವಕರು ಹೋರಾಟಕ್ಕೆ ಧುಮಕಬೇಕಿದೆ. ತಂತ್ರಜ್ಞಾನ ಯುಗದಲ್ಲಿ ನಾವಿದ್ದರೂ ಆಗಿನ ಕಾಲದಲ್ಲಿ ಒಂದು ಕರೆಕೊಟ್ಟರೂ ಸಾಕು ಸಾವಿರ ಸಾವಿರ ಸಂಖ್ಯೆಯಲ್ಲಿ ಹೋರಾಟಕ್ಕೆ ಜನರು ಬರುತ್ತಿದ್ದರು. ಈಗ ಪ್ರಾಮಾಣಿಕ ಹೋರಾಟಗಾರರನ್ನು ಹುಡುಕಬೇಕಿದೆ ಎಂದರು.
ಜಿಲ್ಲೆಯಲ್ಲಿ ನೀರಾವರಿ ಹೋರಾಟಕ್ಕೆ ನುಲೇನೂರು ಶಂಕರಪ್ಪ ಅವರ ಕೊಡುಗೆ ದೊಡ್ಡದಿದೆ. ಇಂತಹವರ ಹೆಸರಿನಲ್ಲಿ ಪ್ರತಿಷ್ಥಾನ ಆರಂಭಿಸಿ ಮೊದಲ ಬಾರಿಗೆ ಮಹಿಳಾ ಹೋರಾಟಗಾರರಿಗೆ ಶಂಕರಪ್ಪನವರ ಹೆಸರಿನಲ್ಲಿ ಪುರಸ್ಕಾರ ಮಾಡುತ್ತಿರುವುದು ಅವರ ಹೋರಾಟದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರೈತ ಚಳವಳಿ ಉತ್ತುಂಗದಲ್ಲಿ ಇದ್ದ ಕಾಲದಲ್ಲಿಯೇ ದಲಿತ ಚಳವಳಿಯೂ ಕೂಡ ರಾಜ್ಯದಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು. ರೈತ, ದಲಿತ, ಕಾರ್ಮಿಕ ಚಳವಳಿಗಳು ಒಂದೇ ವೇದಿಕೆಯಲ್ಲಿ ಸೇರಿ ಸಂಯುಕ್ತ ಹೋರಾಟ ಎಂದು ಮಾಡಿಕೊಂಡು ಈ ನಾಡಿನ ಉಳಿವಿಗಾಗಿ ಹೋರಾಡುವ ಅಗತ್ಯವಿದೆ. ಕಾಮ್ರೆಡ್ ವರಲಕ್ಷ್ಮೀ ಅವರ ಹೋರಾಟವನ್ನು ಕಣ್ಣಾರೆ ಕಂಡಿರುವ ನಾವುಗಳು ಅವರಿಂದ ಮಹಿಳಾ ಹೋರಾಟಕ್ಕೆ ಶಕ್ತಿ ಬಂದಿದೆ ಎಂದು ಬಣ್ಣಿಸಿದರು.
ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಆಮಿಷವೊಡ್ಡಿ ಕಬಳಿಸಲು ಹೋದ ಸರ್ಕಾರದ ವಿರುದ್ಧ ಹಮ್ಮಿಕೊಂಡ ಚಳವಳಿಗೆ ಸೋತ ಸರ್ಕಾರ ನೋಟಿಪಿಕೇಷನ್ ವಾಪಾಸ್ ಪಡೆದಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಇಂತಹ ಯಶಸ್ವಿಗಳು ಹೋರಾಟಗಾರಿಗೆ ಸಿಕ್ಕ ಪುರಸ್ಕಾರ ಎಂದರು.
ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ದಲಿತ ಚಳವಳಿಯಲ್ಲಿ ಹೋರಾಟ ಆರಂಭಿಸಿ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಅಮಾನುಷ ಬೆತ್ತಲೆ ಹೋರಾಟವನ್ನು ಖಂಡಿಸುವ ಚಳವಳಿ ನಡೆಸಿದಾಗ ಸರ್ಕಾರ ಅಂತಹ ಅನಿಷ್ಟ ಪದ್ಧತಿಯನ್ನು ನಿಷೇಧಿಸಿದಾಗ ಅದು ಚಳವಳಿಯ ಗೆಲುವಾಗಿತ್ತು. ಇದಾದ ನಂತರ ರೈತ ಚಳವಳಿಯಲ್ಲಿ ಪ್ರೊ.ನಂಜುಂಡಸ್ವಾಮಿ, ಸುಂದರೇಶ್ ಅಂತಹವರ ಹೋರಾಟದಿಂದ ಪ್ರೇರೇಪಿತಗೊಂಡು ರೈತ ಚಳವಳಿಯಲ್ಲಿ ಅನೇಕ ಹೋರಾಟಗಳ ಮೂಲಕ ಪ್ರಭುತ್ವವನ್ನು ಎಚ್ಚರಿಸುವ ಕೆಲಸ ಮಾಡಲಾಗಿದೆ ಎಂದರು.
ನುಲೇನೂರು ಶಂಕರಪ್ಪ ಪ್ರತಿಷ್ಥಾನದ ವತಿಯಿಂದ ನೀಡಲಾಡ ಹಸಿರು ಪ್ರಶಸ್ತಿ ಸ್ವೀಕರಿಸಿದ ಹೋರಾಟಗಾರ್ತಿ ವರಲಕ್ಷ್ಮೀ ಮಾತನಾಡಿ, ಮೂವತ್ತು ವರ್ಷಗಳ ಹೋರಾಟದಲ್ಲಿ ಎಂದಿಗೂ ಪ್ರಶಸ್ತಿ, ಪುರಸ್ಕಾರಗಳಿಗೆ ಒಪ್ಪಿಕೊಂಡಿಲ್ಲ. ಆದರ್ಶ, ರೈತ ನಾಯಕರೊಬ್ಬರ ಹೆಸರಿನಲ್ಲಿ ಮಹಿಳಾ ಹೋರಾಟಗಾರರನ್ನು ಗುರುತಿಸುವ ಎಚ್ಚರಕ್ಕೆ ನನ್ನದೊಂದು ಲಾಲ್ ಸಲಾಂ ಎಂದು ಬಣ್ಣಿಸಿದರು.
ಈ ಪುರಸ್ಕಾರವನ್ನು ನಾನು ಈ ನಾಡಿನ ಅಂಗನಾಡಿ ಕಾರ್ಯಕರ್ತೆಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಅರ್ಪಿಸುವೆ ಎಂದರು.
ಪ್ರಭುತ್ವದ ವಿರುದ್ಧ ಹೋರಾಟಕ್ಕೆ ಇಳಿದಾಗಲೆಲ್ಲಾ ನಾವು ಮನೆಯನ್ನು ಮರೆತು ಹೋರಾಟ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಭದ್ರತೆ ಇಲ್ಲ. ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಈವತ್ತಿನ ಸರ್ಕಾರಗಳು ಹೋರಾಟಗಾರರ ಮೇಲೆ ನಿಷೇಧಗಳನ್ನು ಹೇರುತ್ತಾ ಬರುತ್ತಿವೆ.
ದೆಹಲಿಯಲ್ಲಿ ನಡೆದ ರೈತರ ಹೋರಾಟದ ಇತಿಹಾಸ ನಮಗೆಲ್ಲಾ ತಿಳಿದಿದೆ. ನೂರು ಜನರು ಮಾತ್ರ ಇಂತಹ ಜಾಗದಲ್ಲಿ ಹೋರಾಟ ಮಾಡಬೇಕು ಎಂಬ ಷರತ್ತು ವಿಧಿಸುವುದನ್ನು ನೋಡಿದರೆ ನಾವೆಲ್ಲಾ ಮಿಂಚು ಹುಳುಗಳಾಗಬೇಕಿದೆ. ರೈತ, ದಲಿತ, ಕಾರ್ಮಿಕ ಅಂದರೆ ಹಸಿರು, ನೀಲಿ, ಕೆಂಪು ಒಂದಾಗದಿದ್ದರೆ ಪ್ರಭುತ್ವದ ಕಾನೂನುಗಳು ನಮ್ಮ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಇರಲಿವೆ ಎಂದು ವಿವರಿಸಿದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಾಡುವ ಕೆಲಸಕ್ಕೆ ಭದ್ರತೆಯಿಲ್ಲದ ಕಾರಣ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಮುಖಂಡ ನುಲೇನೂರು ಶಂಕರಪ್ಪ, ದಲಿತ ಮುಖಂಡ ಎಂ.ಜಯಣ್ಣ ಹಾಗೂ ಓಡೆಯರ್ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯ ಮಟ್ಟದ ಪ್ರಶಸ್ತಿ ಕೊಡಬೇಕು ಎಂಬ ಚಿಂತನೆಯಲ್ಲಿದ್ದೆವು. ಆದರೆ, ಜಯಣ್ಣ ಮತ್ತು ಓಡೆಯರ್ ಹೆಸರಿನಲ್ಲಿ ಬೇರೊಂದು ಸಂಘಟನೆ ಪ್ರಶಸ್ತಿ ಕೊಡಬೇಕು ಎಂಬ ಆಲೋಚನೆಯಲ್ಲಿ ಇದ್ದ ಕಾರಣ ನುಲೇನೂರು ಶಂಕರಪ್ಪ ಅವರ ಹೆಸರಲ್ಲಿ ಪ್ರಾರಂಭಿಸಿರುವ ಪ್ರತಿಷ್ಥಾನದಿಂದ ಹಸಿರು ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಜಯಣ್ಣ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಆಲೋಚನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ನುಲೇನೂರು ಶಂಕರಪ್ಪ ಅವರ ಪುತ್ರ ಡಾ. ರವಿಶಂಕರ್ ಮಾತನಾಡಿ, ತಂದೆಯವರು ಹೋರಾಟದಲ್ಲಿ ಎಂದಿಗೂ ತನ್ನ ತತ್ವ ಸಿದ್ಧಾಂತ ಬಿಟ್ಟವರಲ್ಲ. ಹಣಕ್ಕಾಗಿ ಎಂದಿಗೂ ಯಾರೊಂದಿಗೂ ರಾಜಿಯಾದವರಲ್ಲ. ಎಂತಹ ಕಡುಕಷ್ಟ ಬಂದರೂ ಹಾದಿ ತಪ್ಪಿದವರಲ್ಲ. ಬದಲಾಗಿ ಸಂಕಷ್ಟದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ನಮಗೆ ಜೀವಿತದ ಕಾಲದಲ್ಲಿ ಕಲಿಸಿ ಹೋಗಿದ್ದಾರೆ ಎಂದು ಮೆಲುಕು ಹಾಕಿದರು.
ನುಲೇನೂರು ಶಂಕರಪ್ಪ ಅವರ ಹೆಸರಿನ ಪ್ರಶಸ್ತಿ ಪುರಸ್ಕೃತ ಮಹಿಳಾ ಹೋರಾಟಗಾರ್ತಿ ವರಲಕ್ಷ್ಮೀ ಅವರನ್ನು ಹೂವಿನ ಮಳೆಗರೆಯುವುದರ ಮೂಲಕ ವೇದಿಕೆಗೆ ಕರೆತರಲಾಯಿತು. ಇಪ್ಪತ್ತೈದು ಸಾವಿರ ನಗದು ಹಾಗೂ ನೆನಪಿನ ಫಲಕ ಸೇರಿದಂತೆ ಮೊಳಕಾಲ್ಮೂರು ರೇಷ್ಮೆ ಸೀರೆಯನ್ನು ನೀಡಿ ಗೌರವಿಸಲಾಯಿತು.
ಚಿಂತಕ ಯಾದವರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಆಡಳಿತ ಪಕ್ಷದ ಆರು ಜನ ಶಾಸಕರಿದ್ದರೂ ಸರ್ಕಾರದ ಮೇಲೆ ಒತ್ತಡ ತಂದು ಭದ್ರಾ ಕಾಮಗಾರಿ ಪೂರ್ಣಗೊಳಿಸಲು ವಿಳಂಬಧೋರಣೆ ತೋರುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ವಿನಾಯಕ್ ತೊಡರನಾಳ್ ಮಾತನಾಡಿ, ಶಂಕರಣ್ಣ ಹಾಗೂ ನಾನು ಅಕ್ಕಪಕ್ಕದ ಊರಿನವರು ರೈತರ ಮಕ್ಕಳಾಗಿ ಜನಿಸಿ ಪಟ್ಟಣ ಸೇರಿ ರೈತ ಕಸುಬನ್ನು ಬಿಡುವವರ ಬಗ್ಗೆ ಸದಾ ಬೇಸರಿಸಿಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ನೀರಾವರಿ ಆನುಷ್ಠಾಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ,ಎ.ಲಿಂಗಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ನುಲೇನೂರು ಶಂಕರಪ್ಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮುಂಚೂಣಿ ನಾಯಕರಾಗಿದ್ದರು. ಯೋಜನೆಗೆ ಅನುದಾನ ನೀಡುವಲ್ಲಿ ರಾಜ್ಯ ಸರ್ಕಾರ ಉದಾಸೀನ ತೋರುತ್ತಿದೆ. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಬಾಂಡ್ ಬಿಡುಗಡೆ ಮಾಡಲಿ,ಕೊಳ್ಳಲು ಜನರಿದ್ದಾರೆ ಎಂದರು.
ರೈತ ಮಖಂಡರಾದ ಕೆ.ಪಿ. ಭೂತಯ್ಯ, ಹಂಪಯ್ಯನ ಮಾಳಿಗೆ ಧನಂಜಯ, ಗೋವಿಂದರಾಜು, ಕಾರ್ಮಿಕ ಮುಖಂಡ ಸುರೇಶ್ ಬಾಬು, ಪ್ರಾಂತರೈತ ಸಂಘದ ಯಶವಂತ್ ಮಾತನಾಡಿದರು. ರೈತ ಸಂಘದ ವಲಯ ಕಾರ್ಯದರ್ಶಿ ಅರುಣ್ ಕುಮಾರ್ ಕುರುಡಿ, ಬಸ್ತಿಹಳ್ಳಿ ಸುರೇಶ್ ಬಾಬು, ಹೊರಕೆರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಸಿಪಿಐ ಮುಖಂಡ ಸುರೇಶ್ ಬಾಬು, ಕಮಲಮ್ಮ ನುಲೇನೂರು ಶಂಕರಪ್ಪ ಇದ್ದರು.ಜಡೇಕುಂಟೆ ಮಂಜುನಾಥ್ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿ ವಂದಿಸಿದರು.
































