ಯುವರಾಜ್ ಮೂರನೇ ತರಗತಿಯ ವಿದ್ಯಾರ್ಥಿ. ಪ್ರತಿದಿನ ಕುದುರೆ ಮೇಲೆ ಶಾಲೆಗೆ ಬರುತ್ತಾನೆ. ಹೀಗಾಗಿ ಈ ಬಾಲಕ ಈಗ ಭಾರೀ ಫೇಮಸ್ ಆಗಿಬಿಟ್ಟಿದ್ದಾನೆ.
ಈ ಪುಟ್ಟ ಬಾಲಕ ಬಾರ್ಬಕಾರ ಗ್ರಾಮದಲ್ಲಿ ವಾಸಿಸುತ್ತಾನೆ. ಈ ಗ್ರಾಮವು ರಾಜಧಾನಿ ಗುವಾಹಟಿಯ ಬಳಿಯ ದಕ್ಷಿಣ ಕಾಮರೂಪ ಜಿಲ್ಲೆಯ ಅಸ್ಸಾಂ – ಮೇಘಾಲಯ ಗಡಿ ಭಾಗದಲ್ಲಿರುವ ಒಂದು ಪುಟ್ಟ ಹಳ್ಳಿ. ತೀರಾ ಗ್ರಾಮೀಣ ಪ್ರದೇಶ. ಬಾರ್ಬಕಾರ ಗ್ರಾಮದಲ್ಲಿ ಸಾರಿಗೆ ಸೌಲಭ್ಯವಂತೂ ಇಲ್ಲವೇ ಇಲ್ಲ. ಕಾಲ್ನಡಿಗೆಯೇ ಇವರಿಗೆ ಇರುವ ಏಕೈಕ ಮಾರ್ಗ. ಯುವರಾಜ್ ದಕ್ಷಿಣ ಪಂತನ್ ಬುಡಕಟ್ಟು ಮಾಧ್ಯಮ ಇಂಗ್ಲಿಷ್ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರಿಸಿದ್ದಾನೆ. ಈ ಪುಟ್ಟ ಬಾಲಕ ಓದುತ್ತಿರುವ ಶಾಲೆ ಆತನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಆತನ ಗ್ರಾಮಕ್ಕೂ ಶಾಲೆಯ ನಡುವೆ ದಟ್ಟ ಕಾನನ. ಕಾನನದ ಮಧ್ಯ ಇರುವ ಸುಂದರ ರಸ್ತೆ..
ಆ ಸುಂದರ ರಸ್ತೆಯಲ್ಲಿ ಕುದರೆ ಏರಿ ಬರ್ತಾನೆ ಈ ಪುಟ್ಟ ಯುವರಾಜ. ಈ ಯುವರಾಜ ಒಂದೇ ಒಂದು ದಿನವೂ ಶಾಲೆ ತಪ್ಪಿಸದೇ ತರಗತಿಗಳಿಗೆ ಹಾಜರಾಗುತ್ತಾನೆ. ಯುವರಾಜ್ ನನ್ನು ಶಾಲೆಗೆ ಕರೆತರಲು ಶಾಲಾ ಬಸ್ ಅಥವಾ ವ್ಯಾನ್ ವ್ಯವಸ್ಥೆ ಅಂತೂ ಇಲ್ಲವೇ ಇಲ್ಲ. ಆದರೆ ಅವರ ಬಳಿ ಡಾ. ಭೂಪೇನ್ ಹಜಾರಿಕಾ, ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಹಾಡಿದ ‘ಪಕ್ಕಿರಾಜ್’ನಂತಹ ಕುದುರೆ ಇದೆ. ಯುವರಾಜ್ ಪ್ರತಿದಿನ ನಾಲ್ಕು ಕಿಲೋಮೀಟರ್ ಸವಾರಿ ಮಾಡಿ ದೂರದ ಬೆಟ್ಟ ಮತ್ತು ಅರಣ್ಯ ಪ್ರದೇಶದಿಂದ ಶಾಲೆಗೆ ಒಬ್ಬಂಟಿಯಾಗಿಯೇ ಹೋಗುತ್ತಾನೆ. ಈ ಪುಟ್ಟ ಯುವರಾಜ್ ತನ್ನ ಶಾಲಾ ಚೀಲವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಶಾಲೆಗೆ ಬಂದಾಗ, ಎಲ್ಲರೂ ಅವನತ್ತ ಒಂದು ಬಾರಿ ನೋಡಿಯೇ ನೋಡುತ್ತಾರೆ.
ಆತನ ರಾಜ ಗಾಂಭೀರ್ಯಕ್ಕೆ ಮನಸೋಲದವರೇ ಇಲ್ಲ ಬಿಡಿ.. ಶಾಲೆ ಮುಗಿದ ನಂತರ ಮಗು ತನ್ನ ಪ್ರೀತಿಯ ಕುದುರೆಯ ಮೇಲೇರಿ ಮನೆಗೆ ಮರಳುತ್ತಾನೆ. ಅದು ಥೇಟ್ ರಾಜ ಗಾಂಭೀರ್ಯದಿಂದಲೇ ಅನ್ನುವುದು ಮತ್ತೊಂದು ವಿಶೇಷ. ನಿಷ್ಠೆಯಿಂದ ಶಾಲೆಗೆ ಹೋಗುವುದು ಅಷ್ಟೇ ಅಲ್ಲ , ತನ್ನನ್ನು ನಿತ್ಯವೂ ಶಾಲೆಗೆ ಕರೆದುಕೊಂಡು ಬರುವ ಹಾಗೂ ಮರಳಿ ಸುರಕ್ಷಿತವಾಗಿ ಬಿಡುವ ಕುದುರೆಗೆ ವಿಶ್ರಾಂತಿ ನೀಡಿ ಆಹಾರವನ್ನು ನೀಡುವುದು ಎಂದಿನ ಕಾಯಕವಾಗಿದೆ.
ರಾಜಗಾಂಭೀರ್ಯದ ಯುವರಾಜ್ ರಭಾನ ಆಸೆ ಏನೆಂದರೆ, ಚೆನ್ನಾಗಿ ಅಭ್ಯಾಸ ಮಾಡಿ ಪೊಲೀಸ್ ಆಗುವುದಂತೆ. ಅಂದ ಹಾಗೆ ಈತನಿಗೆ ಪೊಲೀಸರು ಎಂದರೆ ಎಲ್ಲಿಲ್ಲದ ಪ್ರೀತಿ. ಇದೇ ಪ್ರೀತಿ ಈತನನ್ನು ತಾನೊಬ್ಬ ಪೊಲೀಸ್ ಆಗಬೇಕು ಎಂಬ ಆಸೆ ಚಿಗುರೊಡೆಯುವಂತೆ ಮಾಡಿದೆಯಂತೆ.