ಹಲವರು ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಬಂದರೆ ನೈಸರ್ಗಿಕ ಪರಿಹಾರಗಳನ್ನು ಬಳಸುತ್ತಾರೆ. ಅವುಗಳಲ್ಲಿ ಮುಲೇಥಿ ಬೇರು (ಲೈಕೋರೈಸ್ ರೂಟ್) ಒಂದಾಗಿದೆ. ಯಷ್ಟಿಮಧು ಚೂರ್ಣ ಎಂಬ ಹೆಸರಿನಲ್ಲಿ ಈ ಬೇರಿನ ಪುಡಿ ಆಯುರ್ವೇದದ ಅಂಗಡಿಗಳಲ್ಲಿ ಸಿಗುತ್ತದೆ. ಇದರ ಬೇರನ್ನು ಅಥವಾ ಈ ಚೂರ್ಣವನ್ನು ಸ್ವಲ್ಪವೇ ಸ್ವಲ್ಪ ತೆಗೆದುಕೊಂಡು ನೀರಿನಲ್ಲಿ ಹತ್ತು ನಿಮಿಷ ಕುದಿಸಿ ಊಟ ಮಾಡುವುದಕ್ಕಿಂತ ಮುಂಚೆ ಕುಡಿಯುವುದರಿಂದ ಜಠರದ ಒಳಭಾಗದಲ್ಲಿ ರಕ್ಷಣಾ ಕವಚವೊಂದನ್ನು ನಿರ್ಮಿಸಿ ಉರಿ ಮತ್ತು ಎದೆಯುರಿ ಅಥವಾ ಹುಳಿತೇಗು ಆಗದಂತೆ ತಡೆಯಬಹುದು ಎಂದು ವರದಿಯಾಗಿದೆ.
ಇಂಡೊಮೆಥಾಸಿನ್- ಪ್ರೇರಿತ ಹುಣ್ಣುಗಳನ್ನು ಹೊಂದಿರುವ ಇಲಿಗಳಿಗೆ ಲೈಕೋರೈಸ್ ಎಫ್‌ಟಿ (ಫಾಮೋಟಿಡಿನ್) ಸಂಯೋಜನೆಯ ಚಿಕಿತ್ಸೆಯನ್ನು ನೀಡಲಾಯಿತು. ಅಚ್ಚರಿಯ ಸಂಗತಿಯೆಂದರೆ ಇತರೆ ಚಿಕಿತ್ಸೆಗಿಂತ ಎಫ್‌ಟಿ ಮತ್ತು ಲೈಕೋರೈಸ್‌ಗಳು ಹುಣ್ಣುಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಪಬ್‌ಮೆಡ್‌ನಲ್ಲಿ ಪ್ರಕಟವಾದ ಜೋರ್ಡಾನ್‌ನ ಅಲ್- ಇಸ್ರಾ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಫಾರ್ಮಸಿಯು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.
ಪ್ರಯೋಜನಗಳು : ಮುಲೇಥಿಯಲ್ಲಿ ಫೈಟೊಈಸ್ಟ್ರೊಜೆನ್‌ಗಳು ಇದ್ದು ಅದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಇದು ತುಂಬಾ ಪ್ರಯೋಜನಕಾರಿ. ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸಿ ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ. ಅಲ್ಲದೇ ಗ್ಯಾಸ್ಟ್ರಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಮುಲೇಥಿಯು ಸಕ್ಕರೆಗಿಂತ ಸಿಹಿಯಾಗಿರುತ್ತದೆ. ಹಾಗಾಗಿ ಸಿಹಿತಿಂಡಿಗಳು ಮತ್ತು ಔಷಧಿಗಳನ್ನು ತಯಾರಿಸುವಾಗ ನೈಸರ್ಗಿಕ ಸಿಹಿಕಾರಕವಾಗಿ ಇದನ್ನು ಉಪಯೋಗಿಸಲಾಗುತ್ತದೆ.
ಸಂಧಿವಾತ, ಅಲರ್ಜಿ ಮತ್ತು ಚರ್ಮದ ಕಿರಿಕಿರಿಯ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆ್ಯಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ.
ನೋಯುತ್ತಿರುವ ಗಂಟಲು ಮತ್ತು ಉಸಿರಾಟದ ಸೋಂಕುಗಳಿಂದ ಮುಲೇಥಿಯು ಪರಿಹಾರವನ್ನು ನೀಡುತ್ತದೆ.
ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮುಲೇಥಿ ಸಹಾಯ ಮಾಡುತ್ತದೆ. ಹಾರ್ಮೋನುಗಳ ಅಸಮತೋಲನ ಅಥವಾ ಋತುಬಂಧದ ಲಕ್ಷಣಗಳನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಇದರಿಂದ ಪ್ರಯೋಜನ ಪಡೆಯಬಹುದು.
ಆದರೆ ಮುಲೇಥಿಯ ದೀರ್ಘಾವಧಿಯ ಸೇವನೆ ಅಥವಾ ಮಿತಿಮೀರಿದ ಬಳಕೆಯು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ನೀವು ನಿಯಮಿತವಾಗಿ ಬಳಸುವ ಯೋಚನೆಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.