ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಈ ಬಾರಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಲಿದೆ. ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ ನಿಂದ ತಾಪಮಾನ ಸಾಮಾನ್ಯಕಿಂತ ಹೆಚ್ಚಾಗಿರುತ್ತದೆ. ರಾಜ್ಯದ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಕಡಿಮೆ ಶಾಖದ ಅಲೆ, ಬೆಚ್ಚಗಿನ ರಾತ್ರಿ ಇರುತ್ತದೆ. ಮಾರ್ಚ್ ಆರಂಭದಲ್ಲಿಯೇ ಬಿಸಿಲಿನ ತೀವ್ರತೆ ಹೆಚ್ಚಳವಾಗಲಿದೆ. ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ ಶೇ. 65 ರಷ್ಟು ಹೆಚ್ಚಾಗುತ್ತದೆ.
ರಾಜಧಾನಿ ಬೆಂಗಳೂರು ನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಹೊತ್ತು ಬಿಸಿ ವಾತಾವರಣ ಇರುತ್ತದೆ. ಕಲಬುರಗಿಯಲ್ಲಿ ಅತಿ ಹೆಚ್ಚು 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬಹುದು. ಬಳ್ಳಾರಿ, ಬೀದರ್, ವಿಜಯಪುರ, ಕೊಪ್ಪಳ, ರಾಯಚೂರು, ಹಾವೇರಿ, ಧಾರವಾಡ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 43 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ದಾಖಲಾಗುವ ಸಂಭವ ಇದೆ,
ಅದೇ ರೀತಿ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.





























