ಲಖನೌ: ಪೋಷಕರ ಅನುಮತಿಯಿಲ್ಲದೆ ಸ್ವಂತ ಇಚ್ಛೆಯಿಂದ ಮದುವೆಯಾಗಲು ಬಯಸಿದ ಜೋಡಿಗೆ ಯಾವುದೇ ಜೀವ ಬೆದರಿಕೆ ಇಲ್ಲದೆ ಇದ್ದರೆ ಯಾವುದೇ ಪೊಲೀಸ್ ರಕ್ಷಣೆಯನ್ನು ನೀಡುವ ಅವಶ್ಯಕತೆ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad HC) ಬುಧವಾರ, ಏಪ್ರಿಲ್ 16 ರಂದು ತೀರ್ಪು ನೀಡಿದೆ. ನವವಿವಾಹಿತ ದಂಪತಿಗಳು ತಮ್ಮ ಸಂಬಂಧಿಕರಿಂದ ಕಿರುಕುಳದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ತೀರ್ಪು ನೀಡಿದೆ. ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ, ಗಂಭೀರ ಬೆದರಿಕೆ ಇಲ್ಲದಿರುವಾಗ, ಅಂತಹ ದಂಪತಿಗಳು “ಪರಸ್ಪರ ಬೆಂಬಲಿಸಲು ಮತ್ತು ಸಮಾಜವನ್ನು ಎದುರಿಸಲು ಕಲಿಯಬೇಕು” ಎಂದು ಒತ್ತಿ ಹೇಳಿದರು.
ಶ್ರೇಯಾ ಕೇಸರ್ವಾನಿ ಮತ್ತು ಅವರ ಪತಿ ತಮ್ಮ ವೈವಾಹಿಕ ಜೀವನದಲ್ಲಿ ಸಂಬಂಧಿಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ದಂಪತಿಯ ಜೀವ ಅಥವಾ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂಬುದಕ್ಕೆ ನ್ಯಾಯಾಲಯಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಕುಟುಂಬಸ್ಥರು, ಅರ್ಜಿದಾರರ ಮೇಲೆ ದೈಹಿಕ ಅಥವಾ ಮಾನಸಿಕ ಹಲ್ಲೆ ನಡೆಸುವ ಸಾಧ್ಯತೆಯಿದೆ ಎಂದು ಸಾಬೀತುಪಡಿಸಲು ಒಂದು ಸಣ್ಣ ಪುರಾವೆಯೂ ಇಲ್ಲ. ದಂಪತಿಗಳು ಯಾವುದೇ ಔಪಚಾರಿಕ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿಲ್ಲ ಅಥವಾ ಎಫ್‌ಐಆರ್ ನೋಂದಾಯಿಸಲು ಕೋರಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಲತಾ ಸಿಂಗ್ vs ಯುಪಿ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ , ಮದುವೆಗಾಗಿ ಓಡಿಹೋಗುವ ಪ್ರತಿಯೊಂದು ದಂಪತಿಗೆ ನ್ಯಾಯಾಲಯಗಳು ರಕ್ಷಣೆ ನೀಡುವ ಉದ್ದೇಶವನ್ನು ಹೊಂದಿಲ್ಲ ಎಂದು ಹೈಕೋರ್ಟ್ ಪುನರುಚ್ಚರಿಸಿತು. “ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲು ಯಾವುದೇ ಆದೇಶವನ್ನು ಹೊರಡಿಸುವ ಅಗತ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಚಿತ್ರಕೂಟ ಜಿಲ್ಲೆಯ ಎಸ್‌ಪಿಗೆ ಮನವಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು ಮತ್ತು ಯಾವುದೇ ನಿಜವಾದ ಬೆದರಿಕೆಯನ್ನು ಗುರುತಿಸಿದರೆ, ಪೊಲೀಸರು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಲು ಬದ್ಧರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿತು.
ಅತ್ಯಾಚಾರ ಪ್ರಕರಣಗಳಲ್ಲಿ ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ನ ನ್ಯಾಯಾಧೀಶರು ನೀಡಿದ ತೀರ್ಪುಗಳ ಕುರಿತು ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಜಡ್ಜ್ಗಳು ಅನುಚಿತ ಮತ್ತು ಸೂಕ್ಷ್ಮವಲ್ಲದ ಅವಲೋಕನಗಳನ್ನು ಮಾಡಬಾರದು ಕೋರ್ಟ್ ಎಚ್ಚರಿಕೆ ನೀಡಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾರ್ಚ್ 17ರಂದು ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರಿದ್ದ ಏಕಸದಸ್ಯಪೀಠವು, “ಬಾಲಕಿಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮದ ದಾರವನ್ನು ಎಳೆಯುವುದು ಅತ್ಯಾಚಾರವಾಗುವುದಿಲ್ಲ. ಈ ಆರೋಪಗಳು ರೇಪ್ ಮಾಡಿದ್ದಾನೆ ಎಂದು ಹೇಳಲು ಬರುವುದಿಲ್ಲ. ಈ ಕೃತ್ಯಗಳು ಅತ್ಯಾಚಾರಕ್ಕೆ ನಡೆಸಿದ ಸಿದ್ಧತೆಯಷ್ಟೇ. ಇದು ಕೃತ್ಯ ಮಾಡಲು ನಿಜವಾದ ಪ್ರಯತ್ನಕ್ಕಿಂತ ಭಿನ್ನವಾಗಿದೆ ಎಂದು ತೀರ್ಪು ನೀಡಿದ್ದರು.