ಚೆನ್ನೈ : ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಚಪ್ಪಲಿಯಿಂದ ಥಳಿಸಿ ಸಹ ವಿದ್ಯಾರ್ಥಿಗಳ ಗುಂಪೊಂದು ರ್ಯಾಗಿಂಗ್ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಮಧುರೈನಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ಐಟಿಐ ವಿದ್ಯಾರ್ಥಿಯೊಬ್ಬನಿಗೆ ಸಹ ವಿದ್ಯಾರ್ಥಿಗಳ ಗುಂಪೊಂದು ಚಿತ್ರಹಿಂಸೆ ನೀಡಿ, ವಿವಸ್ತ್ರಗೊಳಿಸಿ ಅವಮಾನಿಸಿದೆ. ವಿದ್ಯಾರ್ಥಿಯನ್ನು ರ್ಯಾಗಿಂಗ್ಗೆ ಒಳಪಡಿಸಿದ್ದಕ್ಕಾಗಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಒಬ್ಬನ ಕೈಯಲ್ಲಿ ಟವಲ್ ಇದ್ದು, ವಿದ್ಯಾರ್ಥಿಯ ವಿವಸ್ತ್ರಗೊಳಿಸುವ ಮೊದಲು ಅದನ್ನು ಧರಿಸಿದ್ದ. ವಿದ್ಯಾರ್ಥಿಯು ತನ್ನ ಪ್ಯಾಂಟ್ ಧರಿಸಲು ಅವಕಾಶ ನೀಡುವಂತೆ ಮನವಿ ಮಾಡಿದರೂ, ಆತನ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಲಾಗುತ್ತಿದೆ.
ವೀಡಿಯೊದಲ್ಲಿ, ಮೂವರು ವಿದ್ಯಾರ್ಥಿಗಳು ಯುವ ವಿದ್ಯಾರ್ಥಿಗೆ ಕಿರುಕುಳ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಒಬ್ಬನು ಕೃತ್ಯವನ್ನು ಚಿತ್ರೀಕರಿಸುತ್ತಿದ್ದರೆ, ಇನ್ನೊಬ್ಬ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾನೆ. ಮತ್ತು ಮೂರನೆಯವನು ಆ ವಿದ್ಯಾರ್ಥಿಯ ಬಗ್ಗೆ ಅಶ್ಲೀಲ ಮಾತುಗಳನ್ನು ಆಡಿದ್ದಾನೆ. ಇನ್ನೂ ಹಲವರು ಅಲ್ಲೇ ನಿಂತಿದ್ದರೂ ಕೂಡ ತಪ್ಪಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಇದೆಲ್ಲವೂ ನಶೆಯಲ್ಲಿ ಮಾಡಿರುವಂತಿದೆ ಎಂದು ಆರೋಪ ಮಾಡಲಾಗಿದೆ.