ಅಮರಾವತಿ: ತಿರುಮಲ ಶ್ರೀವರಿ ಲಡ್ಡುವಿನಲ್ಲಿ ಬಳಸುವ ತುಪ್ಪದ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಮೂಲಗಳು ತಿಳಿಸಿವೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಿಬಿಐ, ಈ ವಿಷಯದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಬಂಧಿತ ವ್ಯಕ್ತಿಗಳು ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ತುಪ್ಪ ಪೂರೈಸುವ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಇದರಲ್ಲಿ ತಮಿಳುನಾಡಿನ ಎಆರ್ ಡೈರಿ, ಉತ್ತರ ಪ್ರದೇಶದ ಪರಾಗ್ ಡೈರಿ, ಪ್ರೀಮಿಯರ್ ಅಗ್ರಿ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಸೇರಿವೆ ಎಂದು ಟಿಡಿಪಿ ತಿಳಿಸಿದೆ. ಬಂಧಿತರನ್ನು ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೋಮಿಲ್ ಜೈನ್, ವೈಷ್ಣವಿ ಡೈರಿಯ ಅಪೂರ್ವ ಚಾವ್ಡಾ ಮತ್ತು ಎಆರ್ ಡೈರಿಯ ರಾಜು ರಾಜಶೇಖರನ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತರಲ್ಲಿ ಭೋಲೆ ಬಾಬಾ ಡೈರಿಯ (ರೂರ್ಕಿ, ಉತ್ತರಾಖಂಡ) ಮಾಜಿ ನಿರ್ದೇಶಕರಾದ ಬಿಪಿನ್ ಜೈನ್ ಮತ್ತು ಪೋಮಿಲ್ ಜೈನ್, ವೈಷ್ಣವಿ ಡೈರಿ (ಪೂನಂಬಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ (ದುಂಡಿಗಲ್) ಎಂಡಿ ರಾಜು ರಾಜಶೇಖರನ್ ಸೇರಿದ್ದಾರೆ ಎಂದು ಟಿಡಿಪಿ ತಿಳಿಸಿದೆ. ಮೂಲಗಳ ಪ್ರಕಾರ, ತುಪ್ಪ ಪೂರೈಕೆಯ ಪ್ರತಿ ಹಂತದಲ್ಲೂ ಗಂಭೀರ ನಿಯಮ ಉಲ್ಲಂಘನೆಯು ಎಸ್‌ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಹೀಗಾಗಿ, ನಾಲ್ವರನ್ನು ಬಂಧಿಸಲಾಗಿದೆ. ವೈಷ್ಣವಿ ಡೈರಿ ಅಧಿಕಾರಿಗಳು ದೇವಸ್ಥಾನಕ್ಕೆ ತುಪ್ಪ ಪೂರೈಸಲು ಎಆರ್ ಡೈರಿ ಹೆಸರಿನಲ್ಲಿ ಟೆಂಡರ್‌ಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ಟೆಂಡರ್ ಪ್ರಕ್ರಿಯೆಯನ್ನು ತಿರುಚಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
