ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ. ತಂಡಗಳು ಐಪಿಎಲ್ 2025ರ ಋತುವಿಗಾಗಿ ತಮ್ಮ ಸಂಪೂರ್ಣ ಪಟ್ಟಿಯನ್ನು ಮರುನಿರ್ಮಾಣ ಮಾಡಲು ತಯಾರಿ ನಡೆಸುತ್ತಿವೆ. ಎರಡು ದಿನಗಳ ಮೆಗಾ ಹರಾಜು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ರಿಷಬ್ ಪಂತ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್ ಮತ್ತು ಜೋಸ್ ಬಟ್ಲರ್ ಅವರಂತಹ ಕೆಲವು ದೊಡ್ಡ ಆಟಗಾರರ ಮೇಲೆ ಬಹುದೊಡ್ಡ ನಿರೀಕ್ಷೆ ಇದೆ. 10 ಐಪಿಎಲ್ ಫ್ರಾಂಚೈಸಿಗಳು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಒಟ್ಟು 577 ಆಟಗಾರರು ಹರಾಜು ಪ್ರಕ್ರಿಯೆಗೆ ಪ್ರವೇಶಿಸಲಿದ್ದಾರೆ. ಅವರಲ್ಲಿ 367 ಮಂದಿ ಭಾರತೀಯರಾಗಿದ್ದರೆ, 210 ಮಂದಿ ವಿದೇಶಿ ಆಟಗಾರರು ಇದ್ದಾರೆ. ಐಪಿಎಲ್ ಸೀಸನ್-18ರ ಮೆಗಾ ಹರಾಜು ಸೌದಿ ಅರೇಬಿಯಾ ಸಮಯ ಮಧ್ಯಾಹ್ನ 1 ಗಂಟೆಗೆ ಹಾಗೂ ಭಾರತೀಯ ಕಾಲಮಾನ ಸಂಜೆ 3.30 ರಿಂದ ಶುರುವಾಗಲಿದೆ. ಈ ಬಾರಿಯ ಮೆಗಾ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲೂ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.
