ಕಾರವಾರ: ಇಂದು ರಾಜಕೀಯದಲ್ಲಿ ಸಿದ್ಧಾಂತ ಎಂಬುದು ಉಳಿದಿಲ್ಲ. ಕೇವಲ ಅಧಿಕಾರ ಮತ್ತು ಹಣ ಮಾಡುವುದೇ ಇವತ್ತಿನ ಸಿದ್ಧಾಂತವಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಅವರು, ಯಾರು ಯಾವಾಗ ಬೇಕಾದಾಗ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಬಹುದಾಗಿದೆ. ಚಾರಿತ್ರ‍್ಯ, ಸಿದ್ಧಾಂತ ಹಾಗೂ ತತ್ವದ ಬಗ್ಗೆ ಮಾತನಾಡೋಕೆ ಹೋಗಬೇಡಿ ಎಂದು ಹೇಳಿದರು.
ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕುರಿತು ಮಾತನಾಡಿ, ನನ್ನ ಜೊತೆಗೂ ಹೆಬ್ಬಾರ್ ಚೆನ್ನಾಗಿದ್ದಾರೆ. ನಾವು ಸಿಕ್ಕಾಗ ಪರಸ್ಪರ ಮಾತನಾಡುತ್ತೇವೆ. ನನ್ನ ಜೊತೆಗೆ ಶಾಸಕನಾಗಿ ಸಾಕಷ್ಟು ಬಾರಿ ಆಯ್ಕೆ ಆಗಿದ್ದಾರೆ. ಶಾಸಕನಾಗಿ ಒಳ್ಳೆಯ ಅಭಿವೃದ್ಧಿ ಮಾಡಿದ್ದಾರೆ. ಒಳ್ಳೆಯ ವರ್ಕರ್, ನನ್ನ ಜೊತೆಗೆ ಬಿಜೆಪಿ ಸಂಸದ ಕಾಗೇರಿ ಕೂಡ ಚೆನ್ನಾಗಿ, ಜೊತೆಗಿದ್ದಾರೆ. ಹಾಗಂತ ಪಕ್ಷ ಬಿಟ್ಟು ನಮ್ಮ ಜೊತೆ ಬರ್ತಾರೆ ಅಂತ ಹೇಳೋಕೆ ಬರಲ್ಲ ಎಂದರು.
ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಬೇಕೆಂದು ಎಲ್ಲಿಯೂ ಅರ್ಜಿ ಹಾಕಿಲ್ಲ. ಹೆಬ್ಬಾರ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷ ನನ್ನ ಅಭಿಪ್ರಾಯ ಕೇಳಿದಾಗ ಏನು ಹೇಳಬೇಕೊ ಅದನ್ನ ಹೇಳುತ್ತೇನೆ. ನಾನು 1983ರಿಂದ ಶಾಸಕನಾಗಿದ್ದೇನೆ. ಕೂದಲು ಹಣ್ಣಾಗಿ ಬಿಟ್ಟಿದೆ. ಎಲ್ಲವನ್ನೂ ನೋಡಿದ್ದೇನೆ ಎಂದು ತಿಳಿಸಿದರು.