ಇಂದಿಗೆ ಬಿಸಿ ಸುದ್ದಿ ಕನ್ನಡ website ಗೆ 10 ನೇ ವರ್ಷದ ವಸಂತ.!

 

ಪ್ರೀತಿಯ ಓದುಗರೇ

ಇಂದಿಗೆ ಬಿಸಿ ಸುದ್ದಿ ಕನ್ನಡ website ಆರಂಭವಾಗಿ ಫೆ.16, 2024ಕ್ಕೆ ಹತ್ತನೆ ವರ್ಷಕ್ಕೆ ಪಾದಾರ್ಪಣೆ

Advertisement

ಈ ಒಂಬತ್ತು ತುಂಬಿ 10 ನೇ  ವರ್ಷದ ವಸಂತಕ್ಕೆ ಪಾದಾರ್ಪಣ ಮಾಡುವ ಸಂದರ್ಭದಲ್ಲಿಈ ಹಿಂದೆ ತಾವುಗಳು ತೋರಿದ ಪ್ರೀತಿಗೆ ಬಿಸಿ ಸುದ್ದಿ ಬಳಗ ಸದಾ ಚಿರಋಣಿ ಆಗಿರಲಿದೆ.

ದಶಮಾನೋತ್ಸವದ ಈ ಸಂಭ್ರಮದಲ್ಲಿ ಸಂಪಾದಕನಾಗಿ ನಿಮ್ಮೊಂದಿಗೆ ಕೆಲ ವಿಷಯಗಳನ್ನು ಹಂಚಿಕೊಳ್ಳಬೇಕೆಂಬ ಮಹಾದಾಸೆ ಇದೆ. ಕಾರಣ ನಮ್ಮ ಬಳಗ ಹತ್ತು ವರ್ಷಗಳ ಕಾಲ ನಿರಾಂತಕವಾಗಿ ಹೆಜ್ಜೆ ಹಾಕುವ ಸಂದರ್ಭ ಪ್ರತಿ ಹೆಜ್ಹೆಗೂ ಸ್ಫೂರ್ತಿ ತುಂಬಿ, ಬೆನ್ನು ತಟ್ಟಿ ಪ್ರೋತ್ಸಾಹ ತುಂಬಿದವರು ಓದುಗರಾದ ನೀವುಗಳು.

ಈಗ ನೇರ ವಿಷಯಕ್ಕೆ ಬರುವೆ…..

ಚೋಟಾ ಬಾಂಬೆ ಎಂದೇ ಖ್ಯಾತಿ ಗಳಿಸಿದ್ದ ಚಳ್ಳಕೆರೆ ನನ್ನಟ್ಟೂರು.‌ ನನ್ನ ತಂದೆ ಎಣ್ಣೆ ಮಿಲ್, ಮಂಡಿ ಮಾಲೀಕರು. ಶ್ರೀಮಂತ ಕುಟುಂಬ. ನನ್ನ ಅಮ್ಮ-ಅಪ್ಪನಿಗೆ ನನ್ನನ್ನು ಚೆನ್ನಾಗಿ ಓದಿಸಿ ದೊಡ್ಡ ಹುದ್ದೆಯಲ್ಲಿ ಕೂರಿಸಬೇಕೆಂಬ ಆಸೆ.

ಆದರೆ, ನನಗೆ ನಾಟಕ, ಫಿಲಂ ಹುಚ್ಚು. ಬಳಿಕ ಚಲನಚಿತ್ರ ನಿರ್ದೇಶಕನಾಗುವ ಹುಚ್ಚು ಹಚ್ಚಿಕೊಂಡು ನನ್ನ ಶಾಲಾ ಸಹಪಾಠಿಗಳಾದ ಡಾ.ಬಂಜಿಗೆರೆ ಜಯಪ್ರಕಾಶ್, ಪುಟಾಣಿ ವಿಜ್ಞಾನದ ಸಂಸ್ಥಾಪಕ ಚಳ್ಳಕೆರೆ ಯರ್ರಿಸ್ವಾಮಿ, ಚಂಪಿಕಾ ಜಯಣ್ಣ ಹೀಗೆ ಅನೇಕರನ್ನು ಸೇರಿಸಿಕೊಂಡು ಚಲನಚಿತ್ರ ನಿರ್ದೇಶಿದೆ. ಅದು ಬಿಡುಗಡೆ ಭಾಗ್ಯ ಕಾಣಲಿಲ್ಲ.

ಬಳಿಕ ಹೋರಾಟ ಹಾದಿ ತುಳಿದೆ. ನನ್ನ ಗೆಳೆಯನಾಗಿದ್ದರೂ ಹೋರಾಟದಲ್ಲಿ ನಾ‌ನು ನನ್ನ ನಾಯಕನೆಂದೇ ಗೌರವಿಸುವ ಬಂಜಗೆರೆ ನೇತೃತ್ವದಲ್ಲಿ PVK, KVR ಹೀಗೆ ಅನೇಕ ಚಳವಳಿಯಲ್ಲಿ ತೊಡಗಿಸಿಕೊಂಡೇ.

ಮನೆಯಲ್ಲಿ ಹಠ ಮಾಡಿ ದುಡ್ಡು ಪಡೆದುಕೊಂಡು ಚಿತ್ರದುರ್ಗಕ್ಕೆ ಬಂದು *ವಿಮೋಚನಾ ಸಂಗಾತಿ* ಪತ್ರಿಕೆ ಆರಂಭಿಸಿದೆ.

ಹೀಗೆ ಹೋರಾಟ, ಪತ್ರಿಕಾ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡೇ‌

ವಿಮೋಚನಾ ಸಂಗಾತಿ ಪತ್ರಿಕೆಯ ಕಚೇರಿ ಬಹಳಷ್ಟು ಹೋರಾಟಗಾರರ ತಾಣವಾಗಿತ್ತು. ಜೊತೆಗೆ ಚಿಗುರುಮೀಸೆ, ಮನೆಬಿಟ್ಟ ಹುಡುಗರನ್ನು ಪತ್ರಕರ್ತರನ್ನಾಗಿ ಬೆಳೆಸಿ ಬದುಕು ಕಟ್ಟಿಕೊಡಲು ಪ್ರಮುಖವಾಗಿ ಶ್ರಮಿಸಿತು. ಇಂದು ಆ ನನ್ನ ಹುಡುಗರು ಪ್ರಜಾವಾಣಿ, ಕನ್ನಡಪ್ರಭ, ವಿಜಯವಾಣಿ, ಉದಯವಾಣಿ ಸೇರಿದಂತೆ ದೊಡ್ಡ ದೊಡ್ಡ ಪತ್ರಿಕೆಯಲ್ಲಿ ವರದಿಗಾರಿಕೆ ಸೇರಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಮಧ್ಯೆ ಜಿಲ್ಲೆಗೆ ಏನಾದರೂ ಮಾಡಬೇಕೆಂಬ ನನ್ನಂತಹ ಪತ್ರಕರ್ತರು, ಚಿಂತಕರ ಕನಸು ಹೊಸ ರೂಪ ಪಡೆದು ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ತಂದೇವು. ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹೆಚ್.ಹನುಮಂತಪ್ಪ, ಪ್ರಧಾನ ಸಂಚಾಲಕರಾಗಿ ಬಂಜಿಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸಿದೇವು. ಬಳಿಕ ಪಿ.ಕೋದಂಡರಾಮಯ್ಯ ಅಧ್ಯಕ್ಷರಾದ ಸಂದರ್ಭ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು.‌ ಕೋದಂಡರಾಮಯ್ಯ ಅವರು ರಾಜೀನಾಮೆ ಸಲ್ಲಿಸಿದ ಬಳಿಕ ದಸಂಸ ನಾಯಕ ಎಂ.ಜಯಣ್ಣ ಅಧ್ಯಕ್ಷತೆಯಲ್ಲಿ ಹೋರಾಟದ ರಥವನ್ನು ಎಳೆದೇವು. ಮುಖ್ಯವಾಗಿ ಮುರುಘರಾಜೇಂದ್ರ ಒಡೆಯರ್, ಸೋಮಗುದ್ದು ರಂಗಸ್ವಾಮಿ, ಎಸ್.ಎಂ.ಸದಾನಂದಯ್ಯ, ಕಾಂ.ಚಂದ್ರಪ್ಪ, ಈಚಘಟ್ಟದ ಸಿದ್ದವೀರಪ್ಪ, ಕೆ.ಟಿ.ರುದ್ರಮುನಿ, ನುಲೇನೂರು ಶಂಕರಪ್ಪ, ಜಿ.ಎಸ್.ಉಜ್ಜಿನಪ್ಪ. ಆರ್.ರಾಮಯ್ಯ, ಅನ್ನದಾನಿ ವೀರಭದ್ರಪ್ಪ ಹೀಗೆ ನೂರಾರು ಜನನಾಯಕರ ನೇತೃತ್ವದಲ್ಲಿ ನಡೆಸಿದ ಹೋರಾಟದ ಫಲ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡಿತು. ಈಗ ಹೋರಾಟ ಸಮಿತಿ ಅಧ್ಯಕ್ಷರಾಗಿ ಕೋದಂಡರಾಮಯ್ಯ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಯೋಜನೆ ಕುರಿತು ಸ್ಷಪ್ಟ ಜ್ಞಾನ ಹೊಂದಿರುವ ಅವರ ನೇತೃತ್ವದಲ್ಲಿ ಹೋರಾಟ ಹೊಸ ರೂಪಕ್ಕೆ ಮಗ್ಗಲು ಬದಲಾಯಿಸಬೇಕಿದೆ.

ಇಷ್ಟೆಲ್ಲ ವಿಷಯ ಹೇಳಲು ಮುಖ್ಯ ಕಾರಣ ಪತ್ರಕರ್ತರಾದವರು ಪತ್ರಿಕೆ ಜೊತೆ ಜೊತೆಗೆ ಹೋರಾಟದ ಮನಸ್ಸನ್ನು, ಸಾಮಾಜಿಕ ಬದ್ಧತೆಯನ್ನು ಹೊಂದಿರಬೇಕು. ಅದು ನಿಷ್ಕಲ್ಮಷವಾಗಿರಬೇಕು. ದ್ವೇಷದಿಂದ ಜನಿಸಿದ ಚಳವಳಿ ಕ್ಷಣಿಕವೆಂಬ ಸತ್ಯ ಅರಿತುಕೊಳ್ಳಬೇಕು ಎಂಬುದನ್ನು ನನಗೆ ನನ್ನ ನಾಯಕ ಬಂಜಗೆರೆ ಜಯಪ್ರಕಾಶ್ ಹೇಳಿಕೊಟ್ಟ ಪಾಠ.

ಬಂಜಗೆರೆ ಜಯಪ್ರಕಾಶ್ ಸಹವಾಸದ ಫಲ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಬದುಕಿನ ಬಂಡಿ ಎಳೆದಿದ್ದೇನೆ.

ಅಗ್ನಿ, ಈ ನಮ್ಮ ಕನ್ನಡನಾಡು, ಪ್ರಜಾಪ್ರಗತಿ, ಸೂರ್ಯ ಹೀಗೆ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ನನಗೆ ಒಮ್ಮೆ ದಿಕ್ಕು ತೋಚದಂತೆಯೇ ಆಗಿತ್ತು. ಬದುಕು ಭಾರವೇನಿಸಿತು. ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಆಗ ಹೊಳೆದಿದ್ದೇ ಹೊಸ ಆಲೋಚನೆ ನಾನ್ಯಾಕೆ website ಆರಂಭಿಸಬಾರದು ಎಂದು.

ಇದಕ್ಕೆ ನನ್ನ ಕೆಲ ಗೆಳೆಯರು ಕೈಜೋಡಿಸಿ, ಸಹಕರಿಸಿದರು.

ತೀವ್ರ ಆತಂಕ, ದುಗುಡದಲ್ಲಿಯೇ ಬಿಸಿ ಸುದ್ದಿ website ಆರಂಭಿಸಿದೆ. ಅದು ಮಧ್ಯಕರ್ನಾಟಕದಲ್ಲಿಯೇ ಪ್ರಥಮ website ಎಂಬ ಹೆಗ್ಗಳಿಕೆ. ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಶ್ರೀ ಬಸಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಚಾಲನೆ ನೀಡಿದರು. ಅಂದು ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಈ.ಮಹೇಶಬಾಬು ಅಧ್ಯಕ್ಷತೆ ವಹಿಸಿದ್ದರು. ಜಿ.ಎನ್.ಮಲ್ಲಿಕಾರ್ಜನಪ್ಪ ಸಾಮಾಜಿಕ ಜಾಲತಾಣದ ಕುರಿತು ಚೆಂದ ಮಾತನಾಡಿದರು.‌ ನನ್ನ ಕಚೇರಿಯಲ್ಲಿ ಬೆಳೆದ ನನ್ನ ಹುಡುಗರಾದ ನರೇನಹಳ್ಳಿ ಅರುಣಕುಮಾರ್, ಚಿಕ್ಕಪ್ಪನಹಳ್ಳಿ ಷಣ್ಮುಖ ಅತಿಥಿಗಳಾಗಿದ್ದರು. ಮುಖ್ಯವಾಗಿ ಬಹಳಷ್ಟು ಹಿರಿಯರು ಪಾಲ್ಗೊಂಡು ಶುಭಹಾರೈಸಿದರು.

ಉದ್ಘಾಟನೆ ಮರುದಿನದಿಂದ ಸವಾಲುಗಳು ಸಾಲು ಸಾಲಾಗಿ ಎದುರುಗೊಂಡವು. ಹಣಕಾಸು, ತಂತ್ರಜ್ಞಾನ ಹೀಗೆ ಅನೇಕ ಸಮಸ್ಯೆಗಳು ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗುತ್ತಿದ್ದವು.

ಸ್ನೇಹಿತರ ಅದರಲ್ಲೂ ಮುಖ್ಯವಾಗಿ  ಓದುಗರಾದ ನೀವುಗಳು ಪ್ರತಿ ಸಂದರ್ಭ ಬೆನ್ನು ತಟ್ಟಿದ ಪ್ರತಿಫಲ ಎಲ್ಲ ಸವಾಲನ್ನು ಮೆಟ್ಟಿ ನಿಲ್ಲಲು ನನ್ನಿಂದ ಸಾಧ್ಯವಾಯಿತು. ನಿಮ್ಮೆಲ್ಲರ ಪ್ರೋತ್ಸಾಹದ ಫಲ ಬಿಸಿ ಸುದ್ದಿಗೆ ಹತ್ತು ವರ್ಷ ತುಂಬಿದೆ.

ಇದರೊಂದಿಗೆ ಮತ್ತೊಂದು ಸಂತಸದ ವಿಷಯವೆಂದರೇ ಜಗತ್ತಿನ ಪ್ರಸಿದ್ಧ ಸಂಸ್ಥೆ ಗೂಗಲ್ ನಿಮ್ಮ ಬಿಸಿ ಸುದ್ದಿಯ ಬೆಳವಣಿಗೆಗೆ ಕೈಜೋಡಿಸಿದೆ. Google ಸಂಸ್ಥೆಯ ಸಹಕಾರದ ಫಲ ಶೀಘ್ರದಲ್ಲಿಯೇ ಬಿಸಿ ಸುದ್ದಿಯ ಹೈಟೆಕ್ ಕಚೇರಿ, ಗಣ್ಯರ ಸಂದರ್ಶನ ಸೇರಿ ವಿವಿಧ ಚಟುವಟಿಕೆ ನಡೆಸಲು ಆಧುನಿಕ ಸ್ಟುಡಿಯೋ ಚಿತ್ರದುರ್ಗ ನಗರ ಕೇಂದ್ರದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದೆ.

ಅದರ ಉದ್ಘಾಟನೆಗೆ ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುವೆ.. ಆ ಸುಸಂದರ್ಭದಲ್ಲಿ ನಿಮ್ಮ ಉಪಸ್ಥಿತಿ ನಮ್ಮ ಬಿಸಿ ಸುದ್ದಿ ಬಳಗಕ್ಕೆ ಸಡಗರವನ್ನು ತಂದುಕೊಡಲಿದೆ ಎಂಬುದು ಮಾತ್ರ ಸತ್ಯ. ಶೀಘ್ರದಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿ ನಿಮ್ಮ‌ ಕೈಗೆ ಇಡಲಿದ್ದೇನೆ. ಅಂದು ಬಂದು ಶುಭಹಾರೈಸುವುದನ್ನು ಮರೆಯದಿರಿ.

ಎಂದಿನಂತೆ ನಮ್ಮ ಬಳಗಕ್ಕೆ ನಿಮ್ಮ ಸಹಕಾರ, ಪ್ರೋತ್ಸಾಹದ ಮಾತುಗಳು ಇರಲಿ ಎಂದು ಕೋರುತ್ತೇನೆ.

ನಿಮ್ಮ

ಚಳ್ಳಕೆರೆ ಬಸವರಾಜ್

ಸಂಪಾದಕ

ಮೊ.ನಂ: 9916881352

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement