ಚಿತ್ರದುರ್ಗ:ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಸೌಲಭ್ಯ ಕಲ್ಪಿಸಬೇಕೆಂಬ ಮೂರು ದಶಕದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಿದ ತೀರ್ಪು ಐತಿಹಾಸಿಕ ಗೆಲುವು ತಂದುಕೊಟ್ಟಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರ್ಕಾರ ಒಳಮೀಸಲಾತಿ ಸಂಬಂಧ ಜಾರಿಗೆ ಮುಂದಾಗಿದ್ದ ನಡೆಗೆ ಸುಪ್ರೀಂಕೋರ್ಟ್ ಅಸ್ತು ಎನ್ನುವ ಮೂಲಕ ಮೀಸಲಾತಿ ವರ್ಗೀಕರಣ ಸಂವಿಧಾನಾತ್ಮಕ ನಿರ್ಧಾರ ಎಂಬ ಸಂದೇಶ ನೀಡಿದೆ.
ಸತತ 30 ವರ್ಷಗಳಿಂದ ದಲಿತಪರ ಸಂಘಟನೆಗಳು, ಜನಪ್ರತಿನಿಧಿಗಳು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದರ ಫಲ ದೊರೆತಿದೆ.
ಕತ್ತಲ ಬದುಕಿನಲ್ಲಿದ್ದ ಎಸ್ಸಿಯಲ್ಲಿ ಬಹಳಷ್ಟು ಸಮುದಾಯಗಳಿಗೆ ಕೋರ್ಟ್ ತೀರ್ಪು ಐಸಿಯು ನಲ್ಲಿದ್ದವರಿಗೆ ಬದುಕುವ ಭರವಸೆಯಂತೆ ಆಶಾಭಾವನೆ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಒಳಮೀಸಲಾತಿ ಜಾರಿ ಸಂಬಂಧ ಹೋರಾಟ ತೀವ್ರಗೊಂಡ ಸಂದರ್ಭ ಅಂದಿನ ಕಾಂಗ್ರೆಸ್ ಸರ್ಕಾರ ನ್ಯಾ.ಸದಾಶಿವ ನೇತೃತ್ವದಲ್ಲಿ ಅಯೋಗ ರಚಿಸುವ ಮೂಲಕ ಹೋರಾಟಕ್ಕೆ ಸ್ಪಂದಿಸಿತ್ತು. ಸದಾಶಿವ ಆಯೋಗ ವರದಿ ನೀಡಿದ್ದರೂ ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಹಲವು ಅಡ್ಡಿ ಆತಂಕಗಳು ಎದುರಾಗಿದ್ದವು. ಆದರೆ, ಪ್ರಸ್ತುತ ಕೋರ್ಟ್ ತೀರ್ಪು ಸದಾಶಿವ ಆಯೋಗದ ವರದಿ ಜಾರಿಗೆ ಆನೆಬಲ ನೀಡಿದೆ. ಆದ್ದರಿಂದ ಹೋರಾಟ ಹುಟ್ಟಿದ ಕರ್ನಾಟಕ ಮತ್ತು ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕೂಡಲೇ ಒಳಮೀಸಲು ಸೌಲಭ್ಯ ಕಲ್ಪಿಸಲು ಸರ್ಕಾರಗಳು ಮುಂದಾಗಬೇಕು. ಈಗಾಗಲೇ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸುವುದನ್ನು ರದ್ದುಗೊಳಿಸಿ, ಮೀಸಲಾತಿ ವರ್ಗೀಕರಣಗೊಂಡ ಬಳಿಕ ಅರ್ಜಿ ಆಹ್ವಾನಿಸಬೇಕು ಎಂದು ಆಂಜನೇಯ ಒತ್ತಾಯಿಸಿದ್ದಾರೆ.
ಆರಂಭದಿಂದಲೂ ಒಳಮೀಸಲು ಪರವಿದ್ದ ಕಾಂಗ್ರೆಸ್ ಈ ಬಾರಿಯ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಲಿಖಿತವಾಗಿ ಘೋಷಿಸಿತ್ತು. ಜೊತೆಗೆ ಒಳಮೀಸಲು ಸಂಬಂಧ ಸಿದ್ಧರಾಮಯ್ಯ ಸರ್ಕಾರ ಆರು ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಈಗಿನ ಕೋರ್ಟ್ ತೀರ್ಪು ದಲಿತಪರ ಹೋರಾಟಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ನಡೆಗೆ ಜಯ ಸಿಕ್ಕಂತಾಗಿದೆ ಎಂದು ಆಂಜನೇಯ ಸಂತಸ ವ್ಯಕ್ತಪಡಿಸಿದ್ದಾರೆ.
ಸದಾ ನೊಂದ ಜನರು, ಅದರಲ್ಲೂ ದಲಿತರ ಪರ ಹತ್ತಾರು ಯೋಜನೆ ಜಾರಿಗೊಳಿಸಿ, ದೇಶದಲ್ಲಿಯೇ ಎಸ್‍ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿಗೊಳಿಸಲು ನಾನು ಸಚಿವನಾಗಿದ್ದ ಸಂದರ್ಭ ನನ್ನ ಬೆನ್ನಿಗೆ ನಿಂತಿದ್ದ ಹಾಗೂ ದೇಶದಲ್ಲಿಯೇ ಅಹಿಂದ ನೇತಾರ ಎಂಬ ಹೆಗ್ಗಳಿಕೆ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಇಡೀ ದೇಶವೇ ಕರ್ನಾಟಕದ ನಡೆಯತ್ತ ನೋಡುವ ರೀತಿ ಮಾಡುತ್ತಾರೆ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.