ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಪ್ರಕಟ : ಟಿ.ವೆಂಕಟೇಶ್

 

ಚಿತ್ರದುರ್ಗ : ಜೂನ್ 21ರಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಜೂನ್ 03ರಂದು ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಸಲು ಅಧಿಸೂಚನೆ ಪ್ರಕಟಿಸಿದೆ. ಈ ಚುನಾವಣೆಗೆ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು. ಕ್ಷೇತ್ರದ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮಾಹಿತಿ ನೀಡಿ, ಈಗಾಗಲೇ ನಡೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿಗಳು, ನಿಯೋಜಿತ ಅಧಿಕಾರಿಗಳ ತಂಡಗಳ ಕಾರ್ಯ ಜೂನ್ 06ರವರೆಗೆ ವಿಧಾನ ಪರಿಷತ್ ಚುನಾವಣೆಯ ನೀತಿಸಂಹಿತೆ ಪೂರ್ಣಗೊಳ್ಳುವವರೆಗೂ ಮುಂದುವರೆಯಲಿವೆ. ಚೆಕ್‍ಪೋಸ್ಟ್‍ಗಳು, ತನಿಖಾ ತಂಡಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯುವ ಹಣಕಾಸು ವಹಿವಾಟುಗಳ ಬಗ್ಗೆಯೂ ಸೂಕ್ಷ್ಮವಾಗಿ ಕಣ್ಣಿಡಲಾಗುವುದು ಎಂದರು.

Advertisement

ಈ ಚುನಾವಣೆಯೂ ಕೂಡ ಶಾಂತಿಯುತವಾಗಿ, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ 4615ಮತದಾರರಿದ್ದು, ಜೂನ್ 03ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ ಎಂದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು 2023ರ ಡಿಸೆಂಬರ್ 30ರಂದು ಪ್ರಕಟಿಸಲಾಗಿದೆ. ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 3238ಪುರುಷರು, 1377ಮಹಿಳೆಯರು ಸೇರಿದಂತೆ ಒಟ್ಟು 4615 ಶಿಕ್ಷಕ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಂತೆ ಮೊಳಕಾಲ್ಮೂರು ತಾಲೂಕಿನಲ್ಲಿ 210ಪುರುಷರು, 43ಮಹಿಳೆಯರು ಸೇರಿದಂತೆ ಒಟ್ಟು 253 ಶಿಕ್ಷಕ ಮತದಾರರು, ಚಳ್ಳಕೆರೆ ತಾಲೂಕಿನಲ್ಲಿ 683ಪುರುಷರು, 220ಮಹಿಳೆಯರು ಸೇರಿ ಒಟ್ಟು 903 ಶಿಕ್ಷಕರು, ಚಿತ್ರದುರ್ಗ ತಾಲೂಕಿನಲ್ಲಿ 929 ಪುರುಷರು, 590ಮಹಿಳೆಯರು ಸೇರಿ ಒಟ್ಟು 1519ಶಿಕ್ಷಕರು, ಹಿರಿಯೂರು ತಾಲೂಕಿನಲ್ಲಿ 571ಪುರುಷರು, 251 ಮಹಿಳೆಯರು ಸೇರಿ ಒಟ್ಟು 822 ಶಿಕ್ಷಕರು, ಹೊಸದುರ್ಗ ತಾಲೂಕಿನಲ್ಲಿ 499ಪುರುಷರು, 166ಮಹಿಳೆಯರು ಸೇರಿ ಒಟ್ಟು 665ಶಿಕ್ಷಕರು ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 346ಪುರುಷರು, 107ಮಹಿಳೆಯರು ಸೇರಿ ಒಟ್ಟು453 ಶಿಕ್ಷಕರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4615 ಶಿಕ್ಷಕರು ಮತದಾರರು ಇದ್ದಾರೆ ಎಂದರು.

ಇಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮೇ16ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಮೇ 17ರಂದು ನಾಮಪತ್ರಗಳ ಪರಿಶೀಲನೆ, ಮೇ 20ರಂದು ಉಮೇದುವಾರರು ತಮ್ಮ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ. ಜೂನ್ 03ರಂದು ಬೆಳಿಗ್ಗೆ 8ರಿಂದ ಸಂಜೆ 4ರವರಗೆ ಮತದಾನ ನಡೆಯಲಿದ್ದು, ಜೂನ್ 06ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತೀಕ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement