ನೇರಲಗುಂಟೆ ಗ್ರಾಮ ಪಂಚಾಯಿತಿ ಪಿಡಿಒ ಅಮಾನತು.!

 

ಚಿತ್ರದುರ್ಗ: ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ಸಂಬಂಧ ಚಳ್ಳಕೆರೆ ತಾಲ್ಲೂಕು ನೇರಲಗುಂಟೆ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಹನುಮಂತ ಕುಮಾರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.

ನೇರಲಗುಂಟೆ ಪಿಡಿಒ ಎಸ್.ಹನುಮಂತಕುಮಾರ್ ಅವರು ಗ್ರಾಮ ಪಂಚಾಯಿತಿ ಕಚೇರಿ ಕರ್ತವ್ಯಕ್ಕೆ 2024ರ ಸೆಪ್ಟೆಂಬರ್ 30 ರಿಂದ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಸಾರ್ವಜನಿಕರ ಕುಂದುಕೊರತೆಗಳಿಗೆ  ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ದೂರವಾಣಿ ಕರೆ ಮಾಡಿದರೂ ಸಹ ಸ್ವೀಕರಿಸದೇ ಇರುವುದರಿಂದ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಡಚಣೆ ಉಂಟಾಗಿದ್ದು, ಇವರನ್ನು ಬದಲಾವಣೆ ಮಾಡಿ ಅದೇ ಗ್ರಾಮ ಪಂಚಾಯಿತಿಯ ಗ್ರೇಡ್-1 ಕಾರ್ಯದರ್ಶಿ ಕೆ.ಎಸ್.ಜಯಣ್ಣ ಅವರಿಗೆ ಪ್ರಭಾರ ವ್ಯವಸ್ಥೆ ಮಾಡಿಕೊಡಲು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಕೋರಿದ್ದು, ಅದರಂತೆ, ನೇರಲಗುಂಟೆ ಗ್ರಾ. ಪಂ ಹಾಜರಾತಿ ಪರಿಶೀಲಿಸಲಾಗಿ ಈ ನೌಕರರು 2024ರಿಂದ  ಇಲ್ಲಿಯವರೆಗೂ ಪೂರ್ವಾನುಮತಿ ಪಡೆಯದೇ ಕಚೇರಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡುಬಂದಿರುತ್ತದೆ.

Advertisement

ಈ ಹಿಂದೆಯೂ ಸಹ ಅನಧಿಕೃತವಾಗಿ ಗೈರು ಹಾಜರಾಗಿದ್ದು, ಅದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. ಪಿಡಿಒ ಎಸ್.ಹನುಮಂತಕುಮಾರ್ ಅವರು ವಿರುದ್ಧ ಶಿಸ್ತುಕ್ರಮಕೈಗೊಳ್ಳಲು, ಆಡಳಿತಾತ್ಮಕ ಹಿತದೃಷ್ಠಿಯಿಂದ ಗ್ರೇಡ್-1 ಕಾಯದರ್ಶಿ ಕೆ.ಎಸ್.ಜಯಣ್ಣ ಅವರಿಗೆ ನೇರಲಗುಂಟೆ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ಪ್ರಭಾರ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವರದಿ ನೀಡಿರುತ್ತಾರೆ.

ಈ ಹಿನ್ನಲೆಯಲ್ಲಿ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನೇರಲಗುಂಟೆ ಗ್ರಾಮ ಪಂಚಾಯಿತಿ ಪಿಡಿಒ ಎಸ್. ಹನುಮಂತಕುಮಾರ್ ಅವರು ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿದ್ದುಕೊಂಡು, ಮೇಲಾಧಿಕಾರಿಗಳ ಅನುಮತಿ ಪಡೆಯದೇ ಕರ್ತವ್ಯಕ್ಕೆ ಗೈರು ಹಾಜರಾಗಿ ಕಚೇರಿಯ ದೈನಂದಿನ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟು ಮಾಡುವ ಮೂಲಕ ಸರ್ಕಾರಿ ನೌಕರರ ವೃತ್ತಿಗೆ ತರವಲ್ಲದ ರೀತಿ ವರ್ತಿಸಿ, ಕರ್ನಾಟಕ ನಾಗರೀಕ ಸೇವಾ (ನಡವಳಿ) ನಿಯಾವಳಿಗಳು 3(i), (ii) ಮತ್ತು (iii) ಅನ್ನು ಉಲ್ಲಂಘಿಸಿರುವುದು ಕಂಡು ಬಂದಿರುವ ಕಾರಣ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಅಮಾನತ್ತು ಅವಧಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡುವಂತಿಲ್ಲ ಮತ್ತು ಅನ್ಯ ಉದ್ಯೋಗದಲ್ಲಿ ತೊಡಗುವಂತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement