ಬೆಂಗಳೂರು : ಅತ್ಯಂತ ಸುಂದರವಾಗಿ ನಿರ್ಮಿಸಲಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಲ್ಲಿ ವಿಮಾನಗಳ ಕಾರ್ಯಾಚರಣೆ ಮಂಗಳವಾರದಿಂದ ಆರಂಭಗೊಂಡಿದೆ. ಜೆಡ್ಡಾದಿಂದ ‘ಸೌದಿಯಾ ಏರ್ಲೈನ್ಸ್’ ವಿಮಾನ ಪ್ರಥಮವಾಗಿ ಟರ್ಮಿನಲ್–2ನಲ್ಲಿ ಬಂದಿಳಿಯಿತು. ‘ಎಸ್ವಿ866’ ವಿಮಾನ ಮಂಗಳವಾರ ಬೆಳಿಗ್ಗೆ 10.15ಕ್ಕೆ ಆಗಮಿಸಿತು. ಇಂಡಿಗೊದ 6ಎ1167 ವಿಮಾನ ಕೊಲೊಂಬೊದಿಂದ ಮಧ್ಯಾಹ್ನ 12.10ಕ್ಕೆ ಬಂದಿಳಿಯಿತು. ಭಾರತ ವಿಮಾನ ಸಂಸ್ಥೆಯ ಪ್ರಥಮ ವಿಮಾನ ಇದಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ಟರ್ಮಿನಲ್–2ಗೆ ಪ್ರಥಮ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರಿಗೆ ಡೊಳ್ಳು ಕುಣಿತ ಹಾಗೂ ಯಕ್ಷಗಾನ ಪ್ರದರ್ಶನದ ಮೂಲಕ ಸ್ವಾಗತ ಕೋರಲಾಯಿತು. ‘ಸೌದಿಯಾ’ ವಿಮಾನ ಎಸ್ವಿ867 ಜೆಡ್ಡಾಗೆ ಬೆಳಿಗ್ಗೆ 11.50ಕ್ಕೆ ಟರ್ಮಿನಲ್–2ನಿಂದ ನಿರ್ಗಮಿಸಿತು. ಟರ್ಮಿನಲ್–1ನಲ್ಲಿ ಮಂಗಳವಾರದಿಂದ ದೇಶೀಯ ವಿಮಾನಗಳ ಕಾರ್ಯಾಚರಣೆ ಮಾತ್ರ ಮುಂದುವರಿದಿದೆ. ಇಂಡಿಗೊ, ಆಕಾಶ ಏರ್, ಅಲೈಯನ್ಸ್ ಏರ್ ಮತ್ತು ಸ್ಪೈಸ್ಜೆಟ್ ವಿಮಾನಗಳು ಹಾರಾಟ ನಡೆಸಿದವು. ಟರ್ಮಿನಲ್–2 ಅಂತರರಾಷ್ಟ್ರೀಯ ವಿಮಾನಗಳಿಗೆ ಸೀಮಿತವಾಗಿದ್ದರೂ, ಏರ್ಏಷಿಯಾ, ಏರ್ ಇಂಡಿಯಾ, ಸ್ಟಾರ್ ಏರ್ ಮತ್ತು ವಿಸ್ತಾರದ ದೇಶೀಯ ವಿಮಾನಗಳೂ ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹ್ಯಾರಿ ಮರಾರ್ ಮಾತನಾಡಿ, ‘ಟರ್ಮಿನಲ್–2 ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದ್ದು, ಉತ್ತಮ ಮಳಿಗೆಗಳ ಆಯ್ಕೆಯನ್ನೂ ಹೊಂದಿದೆ. ನಾಗರಿಕರ ಪ್ರಯಾಣವನ್ನು ಮರುವಿಮರ್ಶಿಸಲಾಗಿದೆ’ ಎಂದರು. 2,55,551 ಚದರ ಮೀಟರ್ ವ್ಯಾಪ್ತಿಯಲ್ಲಿರುವ ಟರ್ಮಿನಲ್–2ನಲ್ಲಿ ವಾರ್ಷಿಕ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.