ದಾವಣಗೆರೆ : ನುಡಿದಂತೆ ಭದ್ರಾ ನಾಲೆಯಲ್ಲಿ ಸತತ 100 ದಿನ ನೀರು ಹರಿಸುವ ಮೂಲಕ ದಾವಣಗೆರೆ ಭಾಗದ ರೈತ ಹಿತ ಕಾಯುವ ರಾಜ್ಯ ಸರ್ಕಾರ ಮುಂದಾಗಬೇಕೆಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಆಗ್ರಹಿಸಿದ್ದಾರೆ.
ಭದ್ರಾನಾಲೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಸೋಮವಾರ ನಡೆದ ದಾವಣಗೆರೆ ಬಂದ್ ಬೆಂಬಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯದ ನೀರಿನ ಮಟ್ಟ 166 ಅಡಿಗೆ ಬರುತ್ತಿದ್ದಂತೆಯೇ ಮಳೆಗಾಲದ ಬತ್ತದ ಬೆಳೆಗೆ ಸತತ 100 ದಿನ ನೀರು ಹರಿಸುವುದಾಗಿ ಐಸಿಸಿ ಆದೇಶ ಹೊರಡಿಸಿತ್ತು.
ಇದನ್ನೆ ನಂಬಿಕೊಂಡು ದಾವಣಗೆರೆ ಜಿಲ್ಲೆಯಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಡಿ ಮಾಡಿದ್ದಾರೆ. ಇದಾದ ಒಂದು ತಿಂಗಳ ಬಳಿಕ ಮಳೆ ಕೊರತೆಯೆ ನೆಲವೊಡ್ಡಿ ನಾಲೆಗಳಲ್ಲಿ ನೀರು ನಿಲ್ಲಿಸಿರುವುದು ಈ ಭಾಗದ ರೈತರ ಭವಿಷ್ಯದ ಜೊತೆ ಚಲ್ಲಾಟವಾಡಿದಂತಾಗಿದೆ ಎಂದು ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿ, ಶಿವಮೊಗ್ಗ ಭಾಗದ ಅಡಿಕೆ ಬೆಳೆಗಾರರನ್ನು ಗಮನದಲ್ಲಿ ಇಟ್ಟುಕೊಂಡು ದಾವಣಗೆರೆ ಜಿಲ್ಲೆಯ ಭತ್ತ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. 100 ದಿನ ನೀರು ಕೊಡುವುದಾಗಿ ಭರವಸೆ ನೀಡಿದ ಸರಕಾರ ಮಾತಿನಂತೆ ನಡೆದುಕೊಳ್ಳಬೇಕು ಇದೀಗ ಭೂಮಿಗೆ ಹಾಕಿರುವ ಬಂಡವಾಳ ವಾಪಾಸು ಕೊಡುವವರು. ಪ್ರತಿ ಎಕರೆಗೆ 30 ಸಾವಿರ ಬಂಡವಾಳದAತೆ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಗುವ ಹಾನಿಯ ಅಂದಾಜು ಲೆಕ್ಕಕ್ಕೆ ಸಿಗುವುದಿಲ್ಲ. ಇದರ ಹೊಣೆ ಹೊರುವವರ ಯಾರು ಎಂದು ಪ್ರಶ್ನಿಸಿದರು.
ಇಂದಿನ ದಾವಣಗೆರೆ ಬಂದ್ ಇದು ಪಕ್ಷಾತೀತ ಸಂಘಟನೆಯಿಂದ ನಡೆಯುತ್ತಿರುವ ಹೋರಾಟವಾಗಿದ್ದು, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ರೈತರು ಹೇಗೋ ಬದುಕಬಹುದು. ನೀರು ಹರಿಸದಿದ್ದರೆ ಜಾನುವಾರುಗಳಿಗೆ ಮೇವು ಇಲ್ಲದಂತಾಗಿ ಅವುಗಳು ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಐಸಿಸಿ ಅಧ್ಯಕ್ಷರೂ ಆಗಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ಕೂಡಲೇ ದಾವಣಗೆರೆ ಭಾಗದ ಅನ್ನದಾತನ ಬಗ್ಗೆ ಚಿಂತಿಸಬೇಕೆಂದು ಅವರು ಕೆ.ಬಿ.ಕೊಟ್ರೇಶ್ ಆಗ್ರಹಿಸಿದರು.
ಕಳೆದ ಎಂಟತ್ತು ದಿನಗಳಿಂದ ದಾವಣಗೆರೆ – ಮಲೇಬೆನ್ನೂರು ಭಾಗದಲ್ಲಿ ರಸ್ತೆತಡೆ, ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ರೈತರ ಸಮಸ್ಯೆ ಆಲಿಸುತ್ತಿಲ್ಲ. ಈಗಾಗಲೇ ಕಾಳುಕಟ್ಟುವ ಹಂತದಲ್ಲಿರುವ ಭತ್ತದ ಬೆಳೆ ಒಣಗುವ ಸ್ಥಿತಿಗೆ ಬಂದಿದೆ. ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಒತ್ತಾಯಿಸಿದರು.