ಚಿತ್ರದುರ್ಗ: ಬಿಜೆಪಿ ಪಕ್ಷದ ಕೇಂದ್ರ ನಾಯಕರ ಪಾಲಿಗೆ ಕರ್ನಾಟಕ ರಾಜ್ಯವು ಚುನಾವಣೆಯ ಫಲವತ್ತಾದ ಭೂಮಿಯಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ಶತ್ರು ರಾಷ್ಟ್ರ ದಂತೆ ಕಾಣುತ್ತಿರುವುದಕ್ಕೆ ಈ ಬಾರಿಯ ಬಜೆಟ್ ದೃಢಪಡಿಸಿದೆ ಎಂದು ಮಾಜಿ ಸಂಸದ ನಿ.ಎನ್.ಚಂದ್ರಪ್ಪ ಆರೋಪಿಸಿದ್ದಾರೆ.
ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಪದೇ ಪದೆ ಭೇಟಿ ನೀಡಿ ಭರವಸೆಗಳ ಮಹಾಪುರವನ್ನೆ ಹರಿಸುವ ಬಿಜೆಪಿ ನಾಯಕರಿಗೆ ಬಜೆಟ್ ಮಂಡನೆ ಸಂದರ್ಭದಲ್ಲಿ ಕನ್ನಡದ ಜನರೇ ನೆನಪಾಗುವುದಿಲ್ಲ. ಇದೊಂದು ಕರ್ನಾಟಕ ಜನರ ಪಾಲಿಗೆ ಮಹಾ ವಂಚನೆ ಬಜೆಟ್ ಆಗಿದೆ ಎಂದು ಚಂದ್ರಪ್ಪ ದೂರಿದ್ದಾರೆ.
ಚಿತ್ರದುರ್ಗ, ತುಮಕೂರು ಜಿಲ್ಲೆಯ ಜನರ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆಗೆ ಈ ಹಿಂದಿನ ಬಜೆಟ್ ನಲ್ಲಿ 5300 ಕೋಟಿ ಘೋಷಿಸಿ, ಇಲ್ಲಲಿಯವರೆಗೂ ಬಿಡುಗಡೆ ಮಾಡಿಲ್ಲ. ರಾಷ್ಟ್ರೀಯ ಯೋಜನೆ ಮನ್ನಣೆ ನೀಡಿಲ್ಲ. ಈ ಬಜೆಟ್ ನಲ್ಲಿ ಕೂಡ ನಿರಾಸೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಮದಕರಿನಾಯಕ ಥೀಮ್ ಪಾರ್ಕ್ ಸೇರಿ ಅನೇಕ ಯೋಜನೆಗಳನ್ನು ಘೋಷಿಸಿ, ಜಾರಿಗೊಳಿಸಲಾಗುವುದು. ಚಿತ್ರದುರ್ಗ ಜಿಲ್ಲೆಯನ್ನೇ ಬೃಂದಾವನ ಮಾಡುವುದಾಗಿ ಆಸೆ ಹುಟ್ಟಿಸಿ ಮೋಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಅದರಲ್ಲೂ ಚಿತ್ರದುರ್ಗ, ತುಮಕೂರು ಜಿಲ್ಲೆಗೆ ತೀವ್ರ ಅನ್ಯಾಯ ಮಾಡಲಾಗಿದೆ. ಆದ್ದರಿಂದ ರಾಜ್ಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಕೂಡಲೇ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ವಿಸರ್ಜಿಸಿ ಕನ್ನಡ ಜನರಿಗೆ ಗೌರವ ಕೊಡುವ ಮೂಲಕ ಕೇಂದ್ರದ ವಂಚನೆ ವಿರುದ್ಧ ವಿರೋಧ ವ್ಯಕ್ತಪಡಿಸಬೇಕು. ಇಲ್ಲದಿದ್ದರೇ ರಾಜ್ಯ ಬಿಜೆಪಿಗರು ಕೇಂದ್ರ ನಾಯಕರ ಜೀತದಾಳುಗಳು ಎಂದು ಭಾವಿಸಬೇಕಾಗುತ್ತದೆ ಎಂದು ಬಿ.ಎನ್.ಚಂದ್ರಪ್ಪ ಹೇಳಿದ್ದಾರೆ.