ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆ ವೇಳೆ ತನಗೆ ಚಿತ್ರಹಿಂಸೆ ನೀಡಲಾಗಿದ್ದು, ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ನಟಿ ರನ್ಯಾ ರಾವ್ ಆರೋಪಿಸಿದ್ದಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ (ಎಡಿಜಿ) ರನ್ಯಾ ರಾವ್ ದೂರು ನೀಡಿದ್ದು, ಅಷ್ಟಕ್ಕೂ ನನ್ನನ್ನು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಬಂಧಿಸಿಲ್ಲ, ದುಬೈನಿಂದ ಬರುವಾಗ ವಿಮಾನದಲ್ಲೇ ನೇರವಾಗಿ ಬಂಧಿಸಲಾಗಿದೆ ಎಂದು ರನ್ಯಾ ರಾವ್ ಹೇಳಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್, ಜೈಲು ಮೆಮೋದ ಭಾಗವಾಗಿ ಎಡಿಜಿಗೆ ಸಲ್ಲಿಸಿರುವ ಪತ್ರದಲ್ಲಿ ಅಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ವಿಚಾರಣೆ ವೇಳೆ ಸರಿಯಾಗಿ ಊಟ ಕೊಟ್ಟಿಲ್ಲ, ನಿದ್ದೆ ಮಾಡಲೂ ಬಿಡದೆ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ಖಾಲಿ ಹಾಳೆಗಳ ಮೇಲೆ ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳನ್ನು ರಕ್ಷಿಸಲು ತನ್ನನ್ನು ಸಿಲುಕಿಸಲಾಗಿದೆ. ಅಧಿಕಾರಿಗಳು ನನ್ನ ಮುಖಕ್ಕೆ 10 ರಿಂದ 15 ಬಾರಿ ಹೊಡೆದಿದ್ದಾರೆ. ನನ್ನ ತಂದೆಗೂ ಇದಕ್ಕೂ ಸಂಬಂಧವಿಲ್ಲ. ಆದರೂ ಅವರ ಹೆಸರನ್ನು ಬಹಿರಂಗಗೊಳಿಸುವುದಾಗಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ.
ನಾನು ನಿರ್ದೋಷಿಯಾಗಿದ್ದೇನೆ. ನನ್ನ ಮೇಲೆ ಒತ್ತಡ ಹಾಕಿ, ಹಿಂಸೆ ಕೊಟ್ಟಿದ್ದಾರೆ. ಅವರ ಹಿಂಸೆಯಿಂದಾಗಿ ನಾನು ಖಾಲಿ ಹಾಳೆಗಳಿಗೆ ಸಹಿ ಹಾಕಿದ್ದೇನೆ. ನನ್ನನ್ನು ತಪಾಸಣೆ ಮಾಡಿಲ್ಲ. ನನ್ನಿಂದ ಏನೂ ವಶಪಡಿಸಿಕೊಂಡಿಲ್ಲ ಎಂಬುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೂ ಮೊದಲು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ, ಅಧಿಕಾರಿಗಳು ಹಲ್ಲೆ ನಡೆಸಿದರಾ ಎಂದು ನ್ಯಾಯಾಧೀಶರು ಕೇಳಿದಾಗ, ನಟಿ ಇಲ್ಲ ಎಂದು ಮಾಹಿತಿ ನೀಡಿದ್ದರು. ಆದರೆ, ಇದೀಗ ಅಧಿಕಾರಿಗಳು ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಿದ್ದಾರೆ.