ವಡೋದರಾ : ಪಾನಿಪುರಿಯ ಪ್ರೀತಿ ಎಷ್ಟು ದೂರ ಹೋಗಬಹುದು ಎಂಬುದಕ್ಕೆ ಗುಜರಾತ್ನ ವಡೋದರಾದಲ್ಲಿ ನಡೆದ ಘಟನೆ ಸ್ಪಷ್ಟ ಉದಾಹರಣೆಯಾಗಿದೆ. ಇಲ್ಲಿನ ರಸ್ತೆ ಮಧ್ಯೆ ಮಹಿಳೆಯೊಬ್ಬರು ಕೇವಲ ಎರಡು ಪಾನಿಪುರಿಗಳಿಗಾಗಿ ಟ್ರಾಫಿಕ್ ಜಾಮ್ ಮಾಡಿದ ಅಪರೂಪದ ಘಟನೆ ನಡೆದಿದೆ.
ಸಾಮಾನ್ಯವಾಗಿ ರೂ. 20ಗೆ 6 ಪಾನಿಪುರಿ ನೀಡುತ್ತಿದ್ದವನು, ಆ ದಿನ ಕೇವಲ 4 ಪುರಿಗಳನ್ನು ನೀಡಿದ್ದಾನಂತೆ. ಇದರಿಂದ ಅಸಮಾಧಾನಗೊಂಡ ಮಹಿಳೆ, ಮಾರಾಟಗಾರನಿಗೆ ವಿರೋಧ ವ್ಯಕ್ತಪಡಿಸಿದರು. ಇವರ ಜಟಾಪಟಿಗೆ ಸುತ್ತಮುತ್ತ ವಾಹನಗಳು ಸಂಚರಿಸಲು ತೊಂದರೆಯಾಗಿ, ಸಣ್ಣ ಮಟ್ಟದ ಟ್ರಾಫಿಕ್ ಜಾಮ್ ಉಂಟಾಯಿತು.
ಮಹಿಳೆ ರಸ್ತೆಯ ಮಧ್ಯೆ ಕುಳಿತುಕೊಂಡು, “ನನಗೆ ನನ್ನ ಎರಡು ಪಾನಿಪುರಿ ಬೇಕು!” ಎಂಬ ಆಗ್ರಹದೊಂದಿಗೆ ಪ್ರತಿಭಟನೆಯನ್ನು ಮುಂದುವರೆಸಿದರು. ಈ ದೃಶ್ಯವನ್ನು ಸುತ್ತಮುತ್ತಲವರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಅಂತಿಮವಾಗಿ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯನ್ನು ಸಮಾಧಾನಪಡಿಸಿ ರಸ್ತೆಯಿಂದ ಎಬ್ಬಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಈ ಘಟನೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಮಹಿಳೆಯ ಧೈರ್ಯವನ್ನು ಮೆಚ್ಚಿದರೆ, ಇನ್ನು ಕೆಲವರು ಸಾರ್ವಜನಿಕ ಜಾಗದಲ್ಲಿ ಇಂತಹ ವರ್ತನೆ ಸರಿಯಲ್ಲ ಎಂದು ಟೀಕಿಸಿದ್ದಾರೆ.