ನವದೆಹಲಿ : ಭಾರತದಲ್ಲಿ ದೀರ್ಘ ದೂರದ ರೈಲು ಪ್ರಯಾಣ ಇದೀಗ ಮತ್ತಷ್ಟು ದುಬಾರಿಯಾಗಿದೆ. ರೈಲ್ವೆ ಸಚಿವಾಲಯವು ಶುಕ್ರವಾರ ಟಿಕೆಟ್ ದರಗಳನ್ನು ಹೆಚ್ಚಿಸಿದ್ದು, ಇದು ಆರು ತಿಂಗಳೊಳಗಿನ ಎರಡನೇ ದರ ಏರಿಕೆಯಾಗಿದೆ.
“ಪ್ರಯಾಣಿಕರಿಗೆ ಕೈಗೆಟುಕುವಿಕೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ರೈಲ್ವೆ ಕಾರ್ಯಾಚರಣೆಗಳ ಸುಸ್ಥಿರತೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ,” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಪರಿಷ್ಕೃತ ದರ ರಚನೆಯ ಪ್ರಕಾರ, ಉಪನಗರ ಹಾಗೂ ಉಪನಗರೇತರ ಸೇವೆಗಳು, ಸೀಸನ್ ಟಿಕೆಟ್ಗಳು ಸೇರಿದಂತೆ ಉಪನಗರ ಮಾರ್ಗಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಯಾವಾಗಿನಿಂದ ಹೊಸ ದರ ಅನ್ವಯ?: ಡಿಸೆಂಬರ್ 26 ರಂದು ಅಥವಾ ನಂತರ ಬುಕ್ ಮಾಡಲಾದ ಟಿಕೆಟ್ಗಳಿಗೆ ಮಾತ್ರ ಹೊಸ ದರಗಳು ಅನ್ವಯವಾಗಲಿವೆ. ಡಿಸೆಂಬರ್ 26ಕ್ಕೂ ಮೊದಲು ಬುಕ್ ಮಾಡಿದ ಟಿಕೆಟ್ಗಳಿಗೆ, ಪ್ರಯಾಣದ ದಿನಾಂಕ ಜಾರಿಗೆ ಬಂದ ದಿನದ ನಂತರವಾದರೂ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಎಷ್ಟು ಹೆಚ್ಚುವರಿ ಪಾವತಿಸಬೇಕು? – ವಿವರ ಇಲ್ಲಿದೆ :
ಎರಡನೇ ದರ್ಜೆ (ಸಾಮಾನ್ಯ)
215 ಕಿ.ಮೀ ವರೆಗೆ: ಏರಿಕೆ ಇಲ್ಲ
216–750 ಕಿ.ಮೀ: ರೂ. 5 ಹೆಚ್ಚಳ
751–1,250 ಕಿ.ಮೀ: ರೂ. 10 ಹೆಚ್ಚಳ
1,251–1,750 ಕಿ.ಮೀ: ರೂ. 15 ಹೆಚ್ಚಳ
1,751–2,250 ಕಿ.ಮೀ: ರೂ. 20 ಹೆಚ್ಚಳ
ಸ್ಲೀಪರ್ ಕ್ಲಾಸ್ ಆರ್ಡಿನರಿ, ಫಸ್ಟ್ ಕ್ಲಾಸ್ ಆರ್ಡಿನರಿ: ಪ್ರತಿ ಕಿಲೋಮೀಟರ್ಗೆ 1 ಪೈಸೆ ಹೆಚ್ಚಳ.
ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು : ಎಸಿ ಹಾಗೂ ಎಸಿ ಅಲ್ಲದ ಎಲ್ಲಾ ಕಂಪಾಟ್ಮೆಂಟ್ಗಳಿಗೆ ಪ್ರತಿ ಕಿಲೋಮೀಟರ್ಗೆ 2 ಪೈಸೆ ಹೆಚ್ಚಳ. ಇದರರ್ಥ, ಎಸಿ ಅಲ್ಲದ ಮೇಲ್ ಅಥವಾ ಎಕ್ಸ್ಪ್ರೆಸ್ ರೈಲಿನಲ್ಲಿ 500 ಕಿ.ಮೀ ಪ್ರಯಾಣಿಸಿದರೆ ಪ್ರಯಾಣಿಕರು ಸುಮಾರು ರೂ.10 ಹೆಚ್ಚುವರಿ ಪಾವತಿಸಬೇಕಾಗುತ್ತದೆ.
ಯಾವ ರೈಲುಗಳಿಗೆ ಅನ್ವಯ? : ತೇಜಸ್ ರಾಜಧಾನಿ, ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ಹಮ್ಸಾಫರ್, ಅಮೃತ್ ಭಾರತ್, ತೇಜಸ್, ಮಹಾಮಾನ, ಗತಿಮಾನ್, ಅಂತ್ಯೋದಯ, ಗರೀಬ್ ರಥ, ಜನ ಶತಾಬ್ದಿ, ಯುವ ಎಕ್ಸ್ಪ್ರೆಸ್ ಮತ್ತು ನಮೋ ಭಾರತ್ ರಾಪಿಡ್ ರೈಲ್ ಸೇರಿದಂತೆ ಪ್ರಮುಖ ರೈಲು ಸೇವೆಗಳಿಗೂ ಈ ಹೊಸ ದರಗಳು ಅನ್ವಯವಾಗುತ್ತವೆ.
ಯಾವುದರಲ್ಲಿ ಬದಲಾವಣೆ ಇಲ್ಲ? :
ಕಾಯ್ದಿರಿಸುವಿಕೆ ಶುಲ್ಕ
ಸೂಪರ್ಫಾಸ್ಟ್ ಸರ್ಚಾರ್ಜ್
ಇತರೆ ಪೂರಕ ಶುಲ್ಕಗಳು
ಇವುಗಳನ್ನು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರವೇ ವಿಧಿಸಲಾಗುತ್ತದೆ. ಜಿಎಸ್ಟಿ ಅನ್ವಯಿಕೆಯಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ. “ಪರಿಷ್ಕೃತ ದರ ರಚನೆಯು ಪ್ರಯಾಣಿಕರ ಅನುಕೂಲತೆ ಮತ್ತು ರೈಲ್ವೆಯ ಕಾರ್ಯಾಚರಣಾತ್ಮಕ ಸುಸ್ಥಿರತೆಯನ್ನು ಸಮತೋಲನಗೊಳಿಸುವ ಪ್ರಯತ್ನವಾಗಿದೆ,” ಎಂದು ಸಚಿವಾಲಯ ಹೇಳಿದೆ.
































