ಬೆಂಗಳೂರು : ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಸ್ಟ್ 5 ರಿಂದ (ಇಂದಿನಿಂದ) ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಬೇಡಿಕೆ ಇಡಲಾಗಿದೆ.
1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ,ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ.ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರದ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಇಂದಿನಿಂದ (ಆ.5) ಬೆಳಗ್ಗೆಯಿಂದಲೇ ಮುಷ್ಕರಕ್ಕಿಳಿದಿದ್ದಾರೆ. ಇದರಿಂದ ರಾಜ್ಯಾದ್ಯಂತ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ನಾಲ್ಕು ನಿಗಮಗಳ ಬಸ್‌ಗಳ ಸಂಚಾರ ಸ್ತಬ್ಧಗೊಂಡಿವೆ. ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ಹಾಸನ, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ ಸೇರಿದಂಗೆ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ನೌಕರರು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಗೆ ಧುಮುಕಿದ್ದಾರೆ.
