ಟ್ಯೂಶನ್ ನೀಡುವ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಿಹಾರದ ಮಧುಬನಿ ಜಿಲ್ಲೆಯ ಜಯನಗರ ಪ್ರದೇಶದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಟೀಕೆ, ಅಸಹ್ಯ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಜಯನಗರದ ಭೇಲ್ವಾ ಚೌಕ್ ಗಾಲಿಯಲ್ಲಿರುವ ಟ್ಯೂಶನ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಶಿಕ್ಷಕನನ್ನು ರಾಕೇಶ್ ಯಾದವ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಮಹಿಳೆಯ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ.
ಶಿಕ್ಷಕ ರಾಕೇಶ್, ಮನೆ ಮಾಲೀಕರಾದ ಕುಲದೀಪ್ ಸಿಂಗ್, ಸೋನು ಚೌಧರಿ ಮತ್ತು ವಿಡಿಯೊವನ್ನು ವೈರಲ್ ಮಾಡಿದವರ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿಯು ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿರುವ ಸಾಧ್ಯತೆಯಿದೆ. ಲೈಂಗಿಕ ಕಿರುಕುಳ ನೀಡುತ್ತಿರುವಾಗ ವಿಡಿಯೊ ಚಿತ್ರೀಕರಣ ಮಾಡುವುದಾಗಿ ಮತ್ತು 20 ಲಕ್ಷ ರೂ. ಸುಲಿಗೆ ಮಾಡುವುದಾಗಿ ಮನೆ ಮಾಲೀಕ ಕುಲದೀಪ್ ಸಿಂಗ್ ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿನಿ ದೂರಿದ್ದಾಳೆ. ಅಲ್ಲದೆ ತರಗತಿಗಳಿಗೆ ಬಂದಾಗಲೆಲ್ಲಾ ಕುಲದೀಪ್ ಅನುಚಿತ ಸನ್ನೆಗಳನ್ನು ಮಾಡುತ್ತಿದ್ದರು ಎಂದು ಹೇಳಿದ್ದಾಳೆ.
ಕೆಲವು ವರ್ಷಗಳ ಹಿಂದೆ ರಾಕೇಶ್ ಮತ್ತೊಬ್ಬ ವಿದ್ಯಾರ್ಥಿನಿಯೊಂದಿಗೆ ಇದೇ ರೀತಿಯ ಘಟನೆ ನಡೆದಿತ್ತು ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಆತನ ವಿರುದ್ಧ ಪೊಲೀಸ್ ದೂರು ನೀಡಿದ ನಂತರ ಶಿಕ್ಷಕನನ್ನು ಜೈಲಿಗೆ ಹಾಕಲಾಗಿತ್ತು. ಇದೀಗ ಮತ್ತೆ ರಾಕೇಶ್ ವಿರುದ್ಧ ಮತ್ತದೇ ರೀತಿಯ ಆರೋಪ ಬಂದಿದೆ. ಇದು ಸ್ಥಳೀಯರಲ್ಲಿ ಕೋಪ ತರಿಸಿದ್ದು, ಶಿಕ್ಷಕ ರಾಕೇಶ್‍ನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಪೋಷಕರು ತಮ್ಮ ಮಕ್ಕಳ ವಿರುದ್ಧ ನಡೆಯುವ ಇಂತಹ ಹೇಯ ಕೃತ್ಯಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಸ್ಥಳೀಯರು ಸೂಚಿಸಿದ್ದಾರೆ.