ಹಿಂದೂ ಧರ್ಮದಲ್ಲಿ ತುಳಸಿಗೆ ಪೂಜ್ಯನೀಯ ಸ್ಥಾನ. ಹಾಗಂತ ತುಳಸಿಯನ್ನು ಈ ಭೂಮಿಯಲ್ಲಿ ಹುಟ್ಟಿದ ಯಾರೂ ಕಡೆಗಣಿಸಲಾರರು. ಹಿಂದೂ ಧರ್ಮದಲ್ಲಿ ತುಳಸಿಯನ್ನು ದೇವತೆಯಾಗಿ ಪೂಜಿಸಿದರೆ ಪಾರಂಪರ‍್ಯ ವೈದ್ಯ ಹಾಗೂ ಆಯುರ್ವೇದದಲ್ಲಿ ಔಷದಿಯಾಗಿ ಪರಿಗಣಿಸಲಾಗಿದೆ. ತುಳಸಿ ಗಿಡವು ತನ್ನ ಸುತ್ತಾಮುತ್ತ ಆಮ್ಲಜನಕ ಉತ್ಪತ್ತಿ ಮಾಡುವುದಲ್ಲದೆ, ಕ್ರಿಮಿ ಕೀಟಗಳ ತಡೆಗೂ ಪರಿಣಾಮಕಾರಿ. ಆಯುರ್ವೆದದಲ್ಲಿ ಇದರ ಎಲೆ, ಬೇರು ಕಾಂಡವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ತುಳಸಿಯಲ್ಲಿ ಬಿಳಿ ತುಳಸಿ ಮತ್ತು ಕಪ್ಪು ತುಳಸಿ ಎನ್ನುವ ಬಗೆಯಿದ್ದು, ಬಿಳಿ ತುಳಸಿಯನ್ನು ಲಕ್ಷ್ಮಿ ತುಳಸಿ, ಹಾಗೆ ಕಪ್ಪು ತುಳಸಿಯನ್ನು ಕೃಷ್ಣ ತುಳಸಿ ಎಂದೂ ಕರೆಯುವುದುಂಟು. ಕಾಡು ತುಳಸಿ ಎನ್ನುವ ಇನ್ನೊಂದು ಬಗೆಯಿದ್ದು ಅದನ್ನು ಕೂಡ ಔಷದಿಯಾಗಿ ಬಳಸಲಾಗುತ್ತದೆ. ತುಳಸಿಯು ಮನೆ ಮದ್ದಿನಲ್ಲಿಯೂ ಮಹತ್ವದ ಸ್ಥಾನದಲ್ಲಿದೆ. ಮಕ್ಕಳಿರುವ ಮನೆಯಲ್ಲಂತೂ ತುಳಸಿ ಪ್ರತಿನಿತ್ಯ ಉಪಯೋಗಕ್ಕೆ ಬರುತ್ತದೆ. ತುಳಸಿಯಲ್ಲಿ ಕಫ ಕಮ್ಮಿ ಮಾಡುವ ಗುಣವಿರುವುದರಿಂದ ಶೀತ, ಕೆಮ್ಮಿಗೆ ಪರಿಣಾಮಕಾರಿ.
ಬಾಯಿಯ ದುರ್ಗಂಧ, ಹಲ್ಲಿನ ಸೋಂಕು ಮತ್ತು ಬಾಯಿ ಹುಣ್ಣುಗಳ ನಿವಾರಣೆಗೆ ನಾಲ್ಕೈದು ತುಳಸಿ ಎಲೆಯನ್ನು ಅಗಿದು ತಿನ್ನುವುದರಿಂದ ಉಪಶಮನ ಕಾಣಬಹುದು.
ತುಳಸಿಯು ಹಲವು ಚರ್ಮರೋಗಗಳಿಗೂ ರಾಮಬಾಣ.
ತುಳಸಿ ಎಲೆಯೊಂದಿಗೆ ಶುಂಠಿ, ಕಾಳುಮೆಣಸು, ಬೆಳ್ಳುಳ್ಳಿ, ನಾಲ್ಕು ವೀಲ್ಯದ ಎಲೆ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಶೀತ,ಗಂಟಲು ನೋವು ಕಡಿಮೆಯಾಗಿ ದೇಹದಲ್ಲಿನ ರೋಗನಿರೋದಕ ಹೆಚ್ಚಾಗಲೂ ಕೂಡ ಸಹಕಾರಿ.
ಬರೀ ಹೊಟ್ಟೆಯಲ್ಲಿ 5-6 ತುಳಸಿ ಎಲೆಯನ್ನು ಅಗಿದು ತಿಂದರೆ ರೋಗ ನಿರೋದಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಕಾರಿ.
ತುಳಸಿ ವಾಂತಿ ನಿವಾರಕವಾಗಿಯೂ ಕೆಲಸ ಮಾಡುವುದರಿಂದ, ವಾಂತಿಯ ಲಕ್ಷಣ ಇರುವಾಗ ಎರಡರಿಂದ ಮೂರು ಎಲೆ ತುಳಸಿಯನ್ನು ಜಗಿಯುವುದು ಉತ್ತಮ.
ಮಿತವಾದ ತುಳಸಿ ಸೇವನೆ ದೇಹದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು.
ತುಳಸಿಯ ಎಲೆಯನ್ನು ನೀರಿನಲ್ಲಿ ಕುದಿಸಿ ಅದರ ಆವಿಯನ್ನು ತೆಗೆದುಕೊಳ್ಳುವುದರಿಂದ ಶೀತ ಕಡಿಮೆಯಾಗಬಲ್ಲದು. ಇದು ಅಸ್ತಮಾ ಇರುವವರಿಗೂ ಪರಿಣಾಮಕಾರಿ
ಹೊಟ್ಟೆ ಉಬ್ಬರದಂತಹ ಹೊಟ್ಟೆ ಸಂಬಂದಿತ ಕಾಯಿಲೆಗೆ ತುಳಸಿ ಕಷಾಯ ಪರಿಣಾಮಕಾಯಿ.
ತುಳಸಿ ಕಷಾಯ ಕುಡಿಯುವುದರಿಂದ ಜೀರ್ಣ ಕ್ರೀಯೆಗೆ ಉತ್ತಮ ಎನ್ನಲಾಗುತ್ತದೆ.
ಯಾವುದೇ ಗಿಡಮೂಲಿಕೆಯನ್ನು ಬಳಸುವ ಮೊದಲು ಪರಿಣತರರ ಸಲಹೆ ತೆಗೆದುಕೊಳ್ಳುವುದು ಉತ್ತಮ.