ಚಿತ್ರದುರ್ಗ: ತುಮಕೂರು- ಚಿತ್ರದುರ್ಗ- ದಾವಣಗೆರೆ ಮಧ್ಯೆ ಹೊಸದಾದ ನೇರ ರೈಲ್ವೆ ಮಾರ್ಗದ ಅಂತಿಮ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ದಾವಣಗೆರೆ ಮತ್ತು ತುಮಕೂರು ಕಡೆಯಿಂದ ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಇಲಾಖೆಗೆ ನೈರುತ್ಯ ರೈಲ್ವೆ ವಲಯ ಕಾಂಗ್ರಸ್ ಇತರೆ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಈ ಮಾರ್ಗದ ರೈಲುಗಳ ಸಂಚಾರ ಶುರುವಾದರೆ ಹಳೇ ಮೈಸೂರು ಭಾಗ- ಉತ್ತರ ಕರ್ನಾಟಕ ಮತ್ತಷ್ಟು ಹತ್ತಿರವಾಗಲಿವೆ. ಬೆಂಗಳೂರು ದಾವಣಗೆರೆ -ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಮಧ್ಯೆ 65 ಕಿಮೀ ಅಂತರ ಕಡಿಮೆಯಾಗಿ, ಹಣ-ಸಮಯ, ಇಲಾಖೆಗೆ ಇಂಧನ- ವಿದ್ಯುತ್ ಉಳಿತಾಯ ಆಗಲಿದೆ ಎಂದು ತಿಳಿಸಿದ್ದು ಇದ್ದಲ್ಲದೆ, ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 110 ಕಿಮೀ ಅಂತರ ಕಡಿಮೆಯಾಗುತ್ತದೆ. ಸಿರಾ ಮತ್ತು ಹಿರಿಯೂರು ಸೇರಿದಂತೆ ಹತ್ತಾರು ಹಳ್ಳಿಗಳಿಗೆ ರೈಲ್ವೆ ಸೇವೆ ನೀಡಿದಂತಾಗುತ್ತದೆ. ಹೊಸ ನಿಲ್ದಾಣಗಳು, ಹೊಸ ಮಾರ್ಗದಿಂದಾಗಿ ಸಾಕಷ್ಟು ಉದ್ಯೋಗ ಅವಕಾಶ ಸೃಷ್ಟಿ ಆಗಲಿವೆ ಎಂದಿದ್ದಾರೆ.
ಈ ಹೊಸ ಮಾರ್ಗ ಶುರುವಾದಲ್ಲಿ ಬೆಂಗಳೂರು- ಅರಸೀಕೆರೆ- ಶಿವಮೊಗ್ಗ ಮಾರ್ಗದ ರೈಲು ಸಂಚಾರದಲ್ಲಿ ಶೇ.50ರಷ್ಟು ರೈಲು ಸಂಚಾರದ ಒತ್ತಡ ಕಡಿಮೆಯಾಗಲಿದೆ. ಶಿವಮೊಗ್ಗವು ಬೆಂಗಳೂರಿನಿಂದ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಬಹುದು. ಬೆಂಗಳೂರಿನಿಂದ ಬೆಳಗಾವಿ, ವಿಜಯಪುರ ಮಧ್ಯೆ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ರೈಲು ಸಂಚಾರ ಕನಿಷ್ಠ ಶೇ.35 ರಷ್ಟು ಕಡಿಮೆ ಆಗುತ್ತದೆ. ಪರಿಣಾಮ ಹರಿಹರ-ಬೀರೂರು ಅರಸೀಕೆರೆ ಮಾರ್ಗದಲ್ಲಿ ರೈಲು ದಟ್ಟಣೆ ಕಡಿಮೆಯಾಗಿ, ಹೆಚ್ಚಿನ ಸರಕು ಸಾಗಾಣೆಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
ಐತಿಹಾಸಿಕ ಚಿತ್ರದುರ್ಗ ಕೋಟೆ ವೀಕ್ಷಣೆಗೆ ದೇಶ, ವಿದೇಶದಿಂದ ಬರುವ ಪ್ರವಾಸಿಗರಿಗೂ ಅನುಕೂಲ ಆಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಸ್ಥಳೀಯವಾಗಿ ಹೆಚ್ಚು ಉದ್ಯೋಗ ಸೃಷ್ಟಿ, ಉದ್ಯಮಗಳೂ ಚೇತರಿಕೆ ಕಾಣುತ್ತವೆ. ದಾವಣಗೆರೆ- ಚಿತ್ರದುರ್ಗ ಮಧ್ಯೆ ಆನಗೋಡು, ಹೆಬ್ಬಾಳು, ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ, ಊರಕೇರೆಗೂ ಸಂಪರ್ಕ ಕಲ್ಪಿಸಿದಂತಾಗುತ್ತದೆಂದು ಕಾಂಗ್ರಸ್ ಇತರೆ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಒತ್ತಾಯಿಸಿದ್ದಾರೆ.