ದಾವಣಗೆರೆ : ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ 1,12,170 ಕ್ಯೂಸೆಕ್ಸ್ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಜನರು ನದಿಪಾತ್ರದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದ್ದಾರೆ.
ತುಂಗಾ ಜಲಾಶಯದಿಂದ 68,599 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಮತ್ತು ಭದ್ರಾ ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು, 39017 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿರುತ್ತದೆ. ಪ್ರಸ್ತುತ ತುಂಗಭದ್ರ ನದಿಯಲ್ಲಿ ಅಪಾಯ ಮಟ್ಟ ಮೀರಿ 1,12,170 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇದರಿಂದಾಗಿ ಹೊನ್ನಾಳಿ, ನ್ಯಾಮತಿ ಹಾಗೂ ಹರಿಹರ ತಾಲ್ಲೂಕುಗಳ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಹೊನ್ನಾಳಿ ಪಟ್ಟಣದ ನದಿ ತೀರದ ಬಾಲರಾಜ್‍ಘಾಟ್ ಪ್ರದೇಶದ ಬಳಿ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 8 ಕುಟುಂಬದ 33 ಜನರನ್ನು ಸ್ಥಳಾಂತರ ಮಾಡಿ ಸಂತ್ರಸ್ತರಿಗೆ ಊಟೋಪಚಾರ ಹಾಗೂ ಅಗತ್ಯ ಮೂಲ ಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗಿರುತ್ತದೆ. ಹರಿಹರ ಪಟ್ಟಣದ ಗಂಗಾನಗರ ಬಳಿ ಎಪಿಎಂಸಿ ಭವನದಲ್ಲಿ ಹಾಗೂ ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಜನ ಹಾಗೂ ಜಾನುವಾರುಗಳು ನದಿಗೆ ಇಳಿಯದಂತೆ ತಿಳಿಸಿದೆ ಹಾಗೂ ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿಯ ಬಳಿ ಸೆಲ್ಫಿ ತೆಗೆದುಕೊಳ್ಳವುದನ್ನು ನಿಷೇದಿಸಿದೆ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಹಾಯಕ್ಕಾಗಿ ಈ ಕೆಳಕಂಡ ಸಹಾಯವಾಣಿಗಳನ್ನು ತೆರೆಯಲಾಗಿದೆ.
ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ 08192-234034 ಅಥವಾ 1077 ಎಸ್‍ಡಿಆರ್‍ಎಫ್ ಘಟಕ ದೇವರಬೆಳೆಕೆರೆ 7411308591, ಆಗ್ನಿಶಾಮಕ ಇಲಾಖೆ ದಾವಣಗೆರೆ 08192-258101 ಅಥವಾ 112, ಮಹಾನಗರ ಪಾಲಿಕೆ ದಾವಣಗೆರೆ 08192-234444 ಹಾಗೂ 8277234444 (ವಾಟ್ಸ್‍ಆಪ್) ಸ್ಮಾರ್ಟ್ ಸಿಟಿ, ದಾವಣಗೆರೆ, 18004256020, ತಾಲ್ಲೂಕು ಕಛೇರಿ, ದಾವಣಗೆರೆ 9036396101, ತಾಲ್ಲೂಕು ಕಛೇರಿ, ಹರಿಹರ 08192-272959, ತಾಲ್ಲೂಕು ಕಛೇರಿ, ಜಗಳೂರು 08196-227242, ತಾಲ್ಲೂಕು ಕಛೇರಿ, ಹೊನ್ನಾಳಿ 08188-252108, ತಾಲ್ಲೂಕು ಕಛೇರಿ, ನ್ಯಾಮತಿ 8073951245, ತಾಲ್ಲೂಕು ಕಛೇರಿ, ಚನ್ನಗಿರಿ
08188-295518 ಇಲ್ಲಿ ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.