ಸಿರಿಯಾ :ಸಿರಿಯಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಸ್ಸಾದ್ ಸರ್ಕಾರ ಪತನಗೊಂಡಿದೆ, ಅಧ್ಯಕ್ಷ ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತವು 75 ಭಾರತೀಯರನ್ನು ಇದೀಗ ಸುರಕ್ಷಿತವಾಗಿ ಲೆಬನಾನ್ಗೆ ಸ್ಥಳಾಂತರ ಮಾಡಿದ್ದು, ಶೀಘ್ರವೇ ಭಾರತಕ್ಕೆ ಕರೆತರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿರಿಯಾದಿಂದ ಸ್ಥಳಾಂತರಿಸಲ್ಪಟ್ಟವರಲ್ಲಿ ಜಮ್ಮು ಮತ್ತು ಕಾಶ್ಮೀರದ 44 ಯಾತ್ರಾರ್ಥಿಗಳೂ ಸೇರಿದ್ದಾರೆ.
ರಾಜಧಾನಿ ಡಮಾಸ್ಕಸ್‌ನಿಂದ 10 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಪಟ್ಟಣವಾದ ಸೈದಾ ಜೈನಾಬ್‌ನಲ್ಲಿ ಯಾತ್ರಿಕರು ಸಿಲುಕಿಕೊಂಡಿದ್ದರು. ಸಿರಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು ಭಾರತೀಯ ನಾಗರಿಕರ ನಿರಂತರ ವಿನಂತಿ ಬಳಿಕ ಅವರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿತ್ತು.
ದಂಗೆಯ ನಂತರದ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಇನ್ನೂ ಸಿರಿಯಾದಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ಎಚ್ಚರಿಕೆ ವಹಿಸಲು ಸಲಹೆ ನೀಡಿದೆ. ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮಾರ್ಗಸೂಚಿಗಳ ಬಗ್ಗೆಯೂ ಗಮನ ಹರಿಸುವಂತೆ ಮನವಿ ಮಾಡಲಾಗಿದೆ.