ಬೆಂಗಳೂರು : ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಆರ್‌ಆರ್ ನಗರ ಠಾಣೆಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಕನ್ನಡ ಹಾಗೂ ತೆಲುಗಿನ ಅನೇಕ ಧಾರವಾಹಿಗಳಲ್ಲಿ ನಟಿಸಿರುವ ಚರಿತ್ ಅವರು ತನಗೆ ಪರಿಚಯವಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪ ಕೇಳಿಬಂದಿದೆ. ಪ್ರೀತಿಸುತ್ತೇನೆ ಅಂತ ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆ. ತಾನು ವಾಸ ಮಾಡುತ್ತಿದ್ದ ಮನೆಗೆ ಚರಿತ್ ಸಹಚರರ ಜೊತೆ ನುಗ್ಗಿ ಕಿರುಕುಳ ನೀಡಿದ್ದಾರೆ. ಜೊತೆಗೆ ತನ್ನ ಬಳಿ ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಇದೀಗ ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪಗಳು ಕೇಳಿಬಂದಿವೆ. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಚರಿತ್ ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಚ್ಛೇದನದ ನಂತರವೂ ಅವರು ಮಾಜಿ ಪತ್ನಿಯ ಜೊತೆ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿದೆ.