ವಾಷಿಂಗ್ಟನ್ : ಬುಧವಾರ ರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ, ಟ್ಯಾಕ್ಸಿಂಗ್ ಸಮಯದಲ್ಲಿ ಡೆಲ್ಟಾ ಏರ್‌ಲೈನ್ಸ್‌ಗೆ ಸೇರಿದ ಎರಡು ವಾಣಿಜ್ಯ ವಿಮಾನಗಳು ಪರಸ್ಪರ ಡಿಕ್ಕಿಯಾಗಿ, ಒಂದು ವಿಮಾನದ ರೆಕ್ಕೆ ಸಂಪೂರ್ಣ ಮುರಿದು ಬಿದ್ದಿದೆ. ಅಪಘಾತವು ಸ್ಥಳೀಯ ಸಮಯದ ಪ್ರಕಾರ ರಾತ್ರಿ 9:56ಕ್ಕೆ ನಡೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ದೃಶ್ಯಗಳಲ್ಲಿ, ಪಕ್ಕದ ವಿಮಾನದಿಂದ ತೆಗೆದಂತೆ ಕಾಣುವ ದೃಶ್ಯಗಳಲ್ಲಿ ಟಾರ್ಮ್ಯಾಕ್‌ನಲ್ಲಿ ತುರ್ತು ವಾಹನಗಳ ದೀಪಗಳು ಮಿನುಗುತ್ತಿದ್ದು, ಒಂದು ಜೆಟ್ ವಿಮಾನದ ರೆಕ್ಕೆಗೆ ಗಂಭೀರ ಹಾನಿಯಾಗಿರುವುದು ಸ್ಪಷ್ಟವಾಗಿದೆ.
ಏರ್ ಟ್ರಾಫಿಕ್ ಕಂಟ್ರೋಲ್ ಆಡಿಯೋನ ಪ್ರಕಾರ, ಎರಡು ವಿಮಾನಗಳು ಚಲಾಯಿಸುತ್ತಿದ್ದ ಸಂದರ್ಭದಲ್ಲಿ, ಒಂದು ಜೆಟ್‌ನ ಮುಂಭಾಗವು ಮತ್ತೊಂದು ಜೆಟ್‌ನ ಬಲಭಾಗದ ರೆಕ್ಕೆಗೆ ಡಿಕ್ಕಿ ಹೊಡೆದಿದೆ. ಪೈಲಟ್‌ಗಳು ತಮ್ಮ ವಿಂಡ್‌ಶೀಲ್ಡ್‌ಗೆ ಹಾನಿಯಾಗಿದೆ ಎಂದು ಕೂಡ ತಿಳಿಸಿದ್ದು, ಹವಾಮಾನ ಅಥವಾ ತಾಂತ್ರಿಕ ದೋಷವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವರದಿಗಳ ಪ್ರಕಾರ, ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು, ಸಣ್ಣ ಗಾಯಗಳಾಗಿವೆ ಎನ್ನಲಾಗಿದೆ.
ಈ ಘಟನೆಯಿಂದ ವಿಮಾನಯಾನ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳು ಮೂಡಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಲಾಗಾರ್ಡಿಯಾ ನಿಲ್ದಾಣದಲ್ಲಿ ಸಂಭವಿಸಿರುವ ಅಪಘಾತಗಳಿಗೆ ಇದು ಮತ್ತೊಂದು ಸೇರ್ಪಡೆಯಾಗಿದೆ. 2025ರ ಮಾರ್ಚ್ ತಿಂಗಳಲ್ಲಿ ಡೆಲ್ಟಾ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್‌ವೇಗೆ ಡಿಕ್ಕಿಯಾದ ಘಟನೆ ಕೂಡ ತನಿಖೆಯಲ್ಲಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಹಾಗೂ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಈ ಬಗ್ಗೆ ಪ್ರಾಥಮಿಕ ತನಿಖೆ ಪ್ರಾರಂಭಿಸಿವೆ.