ತಲ್ಲಹಸ್ಸಿ : ಅಮೆರಿಕದ ಫ್ಲೋರಿಡಾ ಸ್ಟೇಟ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯೋರ್ವ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಆಗ್ನೇಯ ಅಮೆರಿಕ ಪೊಲೀಸರು ಮಾಹಿತಿ ನೀಡಿ, ಸ್ಥಳೀಯ ಡೆಪ್ಯೂಟಿ ಶೆರಿಫ್ ಮಗ ಫೀನಿಕ್ಸ್ ಇಕ್ನರ್ ಎಂಬಾತ ತನ್ನ ತಾಯಿಯ ಹಳೆಯ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ.ಫ್ಲೋರಿಡಾ ವಿಶ್ವವಿದ್ಯಾನಿಲಯದೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಗುಂಡು ಹಾರಿಸಲು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ, ಅಲ್ಲಿದ್ದ ವಿದ್ಯಾರ್ಥಿಗಳು ಆತನ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಸುಮಾರು ಎಂಟರಿಂದ ಹತ್ತು ಗುಂಡುಗಳನ್ನು ಸಿಡಿಸಿದ್ದಾನೆ. ಇದೇ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಇಕ್ನರ್ ಕಾಲಿಗೆ ಗುಂಡು ಹಾರಿಸಿದ್ದು, ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕ್ಯಾಂಪಸ್‌ನ್ನು ಬಂದ್ ಮಾಡಲಾಗಿದೆ ಎಂದರು.