ಲಖನೌ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ದೇವಾಲಯವೊಂದರಲ್ಲಿ ಇಂದು ನಸುಕಿನ ಹೊತ್ತು ಕಾಲ್ತುಳಿತ ಸಂಭವಿಸಿ ಇಬ್ಬರು ಭಕ್ತರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.
ಪವಿತ್ರ ಶ್ರಾವಣ ಮಾಸದ ಹಿನ್ನೆಲೆ ಸೋಮವಾರ ಬಾರಾಬಂಕಿಯಲ್ಲಿರುವ ಪ್ರಾಚೀನ ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಕೆಲ ಕೋತಿಗಳು ಓವರ್‌ಹೆಡ್ ವಿದ್ಯುತ್ ತಂತಿಗಳ ಮೇಲೆ ಹಾರಿವೆ. ಇದರಿಂದ ವಿದ್ಯುತ್ ತಂತಿ ತುಂಡಾಗಿ ತಗಡಿನ ಶೆಡ್ ಮೇಲೆ ಬಿದ್ದಿದ್ದು ದುರಂತಕ್ಕೆ ಕಾರಣವಾಗಿದೆ.
ಕೆಲವರಿಗೆ ನೇರವಾಗಿ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಇತರ ಭಕ್ತರಲ್ಲೂ ಆತಂಕ ಹೆಚ್ಚಾಗಿ ನೂಕುನುಗ್ಗಲು ಶುರುವಾಗಿ, ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 29 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸಮೀಪದ ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ತ್ರಿಪಾಠಿ ತಿಳಿಸಿದ್ದಾರೆ.
ಘಟನೆ ತಿಳಿದ ಸಿಎಂ ಯೋಗಿ ಆದಿತ್ಯನಾಥ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೆ ತ್ವರಿತ ಪರಿಹಾರ ಮತ್ತು ಸರಿಯಾದ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.