ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕರ್ನಾಟಕದಲ್ಲಿ ಇಬ್ಬರನ್ನು ಬಂಧಿಸಿದೆ.
ಶಬರಿಮಲೆ ದೇಗುಲದಲ್ಲಿ ಕಲಾಕೃತಿಗಳಿಗೆ ವಿದ್ಯುತ್ ಲೇಪನ ಮಾಡಿದ್ದ ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ ಬಂಧಿತರು.
ಇವರಿಬ್ಬರನ್ನು ವಶಕ್ಕೆ ಪಡೆದು ತಿರುವನಂತಪುರದಲ್ಲಿರುವ ಅಪರಾಧ ವಿಭಾಗದ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ. 2019ರಲ್ಲಿ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ, ದ್ವಾರಪಾಲಕ ಮೂರ್ತಿಗಳು ಹಾಗೂ ಗರ್ಭಗುಡಿಯ ದ್ವಾರಕ್ಕೆ ವಿದ್ಯುತ್ ಲೇಪನಕ್ಕಾಗಿ ಸ್ಮಾರ್ಟ್ ಕ್ರಿಯೇಷನ್‌ಗೆ ತೆಗೆದುಕೊಂಡು ಹೋಗಲಾಗಿದ್ದು, ಆ ವೇಳೆ ಅದರಲ್ಲಿದ್ದ ಚಿನ್ನವನ್ನು ತೆಗೆಯಲಾಗಿದೆ ಎನ್ನುವುದು ಎಸ್‌ಐಟಿ ತನಿಖೆಯಲ್ಲಿ ತಿಳಿದು ಬಂದಿದೆ.
ವಿದ್ಯುತ್ ಲೇಪನದ ವೇಳೆ 400 ಗ್ರಾಂಗೂ ಅಧಿಕ ಚಿನ್ನವನ್ನು ತೆಗೆದು ಅದನ್ನು ಗೋವರ್ಧನಗೆ ಹಸ್ತಾಂತರಿಸಲಾಗಿದೆ ಎಂದು ಪೋಟಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದ್ವಾರಪಾಲಕ ಮೂರ್ತಿಗಳ ಚಿನ್ನಗಳವು ಪ್ರಕರಣದದಲ್ಲಿ ಭಂಡಾರಿ ಹಾಗೂ ಗೋವರ್ಧನ ಆರೋಪಿತರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
































