ಕಾರವಾರ : ಕದಂಬ ನೌಕಾನೆಲೆಯ ಚಿತ್ರಗಳನ್ನು ವಿದೇಶಿ ಬೇಹುಗಾರರಿಗೆ ರವಾನೆ ಮಾಡಿದ್ದ ಆರೋಪದಡಿ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ವಶಕ್ಕೆ ಪಡೆದುಕೊಂಡಿದೆ.
ತಾಲ್ಲೂಕಿನ ಮುದಗಾದ ವೇತನ ತಾಂಡೇಲ, ಅಂಕೋಲಾದ ಅಕ್ಷಯ್ ನಾಯ್ಕ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಇಬ್ಬರ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್‌ಐಎ ಪೊಲೀಸರು ಸೋಮವಾರ ಕಾರವಾರಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದರು. ಎರಡು ಪ್ರತ್ಯೇಕ ತಂಡ ರಚಿಸಿಕೊಂಡು ನಸುಕಿನ ಜಾವ ದಾಳಿ ನಡೆಸಿದ ಎನ್‌ಐಎ ಪಲೀಸರು ಮುದಗಾ ಮತ್ತು ಅಂಕೋಲಾದಲ್ಲಿ ಏಕಕಾಲಕ್ಕೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
2023ರಲ್ಲಿ ನೌಕಾನೆಲೆಯ ಚಿತ್ರಗಳು ಪಾಕಿಸ್ತಾನದ ವಿದೇಶಿ ಬೇಹುಗಾರರಿಗೆ ರವಾನೆಯಾಗಿದ್ದ ಹಿನ್ನೆಲೆಯಲ್ಲಿ ಎನ್‌ಐಎ ಹೈದರಾಬಾದ್ ಘಟಕವು ನೌಕಾನೆಲೆಯ ಕೆಲ ಅಧಿಕಾರಿ, ಸಿಬ್ಬಂದಿಯನ್ನು ವಶಕ್ಕೆ ಪಡೆದಿತ್ತು. ಅದೇ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ತನಿಖಾ ದಳ ನೌಕಾನೆಲೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ವೇತನ್ ಮತ್ತು ಅಕ್ಷಯ್ ನನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
2024ರ ಆಗಸ್ಟ್ ನಲ್ಲಿ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಈ ಮೂವರನ್ನು ಎನ್‌ಐಎ ವಿಚಾರಣೆ ನಡೆಸಿ, ನೋಟೀಸ್ ನೀಡಿತ್ತು. ಇದೀಗ ಮತ್ತೆ ಪ್ರಕರಣ ಸಂಬಂಧ ಮತ್ತೆ ತನಿಖೆ ನಡೆಸಲು ಬಂದಿದ್ದ ಎನ್‌ಐಎ ತಂಡ ಇಬ್ಬರನ್ನು ಬಂಧಿಸಿದೆ.
ಇಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ಬೇಹುಗಾರರು ನೌಕಾನೆಲೆಯ ಚಿತ್ರಗಳನ್ನು ಸಂಗ್ರಹಿಸಿದ್ದರು. ಅದಕ್ಕಾಗಿ ಅವರಿಗೆ ಹಣವನ್ನೂ ಪಾವತಿಸಿದ್ದರು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.