ಧರ್ಮಸ್ಥಳಲ್ಲಿ ನಡೆದಿದೆ ಎನ್ನಲಾದ ಸರಣಿ ಸಾವು ಪ್ರಕರಣಕ್ಕೆ ಸಂಬಂಧ ಸರಕಾರ ನಿಯೋಜಿಸಿದ್ದ ಅಧಿಕಾರಿಗಳ ಪೈಕಿ ಇಬ್ಬರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಈ ಪೈಕಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಐಪಿಎಸ್ ಅಧಿಕಾರಿ ಇದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಧರ್ಮಸ್ಥಳ ಪ್ರಕರಣ ತನಿಖೆ ನಡೆಸಲು ಸರಕಾರ 4 ಅಧಿಕಾರಿಗಳ ಎಸ್‌ಐಟಿ ರಚನೆ ಮಾಡಿತ್ತು. ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಂತಿಗೆ ಮುಂದಾಳತ್ವ ನೀಡಿತ್ತು. ಉಳಿದಂತೆ ತಂಡದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಎಂ.ಎನ್.ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮ ಇದ್ದರು. ಸದ್ಯ ಸಿಎಆರ್ ಕೇಂದ್ರಸ್ಥಾನದ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ ಅವರು ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿಯಲು ನಿರ್ಧರಿಸಿ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಕುರಿತು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ನಡೆದ ಸಭೆಗೂ ಗೈರಾಗಿದ್ದರು.ಸೌಮ್ಯಲತಾ ಅವರು ಯಾವ ಕಾರಣಕ್ಕೆ ಹಿಂದೆ ಸರಿಯುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತಂಡದಿಂದ ಐಪಿಎಸ್ ಅಧಿಕಾರಿ ಹೊರಗುಳಿಯುವ ವಿಚಾರದ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿದ್ದು, ಅಧಿಕೃತವಾಗಿ ನನಗೆ ಅವರು ಮಾಹಿತಿ ತಿಳಿಸಿಲ್ಲ, ಆದರೆ, ಅನ್ ಅಫಿಷಿಯಲ್ ಆಗಿ ಅವರು ತಂಡದಿಂದ ಹೊರಗುಳಿಯುವ ವಿಚಾರಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ. ವೈಯಕ್ತಿಕ ಕಾರಣ ಇದೆ ಹಾಗಾಗಿ ತಂಡದಿಂದ ಹೊರಗುಳಿಯುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಂದು ವೇಳೆ ಆ ರೀತಿ ಇದ್ದರೆ, ಅವರನ್ನು ಬದಲಾಯಿಸಲಾಗುವುದು ಎಂದು ಹೇಳಿದರು.
ಮತ್ತೊಬ್ಬ ನಾನ್ ಐಪಿಎಸ್ ಅಧಿಕಾರಿ ದೂರ ಈ ಪೈಕಿ ಒಬ್ಬ ಅಧಿಕಾರಿಯು ಧರ್ಮಸ್ಥಳ ಕ್ಷೇತ್ರದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ತನಿಖಾ ಕಾರ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇವರೂ ಕೂಡ ಸಿಐಡಿ ಕಚೇರಿಯಲ್ಲಿ ನಡೆದ ತನಿಖಾ ತಂಡ ಸಭೆಯಲ್ಲಿ ಭಾಗಿಯಾಗಿರಲಿಲ್ಲ.
ಹೊಸಬರ ನೇಮಕಕ್ಕೆ ಸರಕಾರಕ್ಕೆ ಶೀಘ್ರ ಪತ್ರ
ಎಸ್‌ಐಟಿ ತಂಡದ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಂತಿ ಅವರು ತನಿಖೆಯಿಂದ ದೂರ ಸರಿದ ಅಧಿಕಾರಿಗಳ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿ ಹೊಸಬರ ನೇಮಕಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.
ಕಾರಣವೇನು?
ಎಂ.ಎನ್.ಅನುಚೇತ್ ಅವರು ಯಾವುದೇ ಭಯದಿಂದ ಧರ್ಮಸ್ಥಳ ಪ್ರಕರಣದ ತನಿಖೆಯಿಂದ ದೂರು ಉಳಿಯುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. 2009ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಅನುಚೇತ್ ಅವರು, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‌ಪಿ) ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು.