ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ
. ಮೃತಪಟ್ಟವರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (40) ಮತ್ತು ಸುಜೀತ್ ಗೋಳಿಯಾಡಿ (26) ಎಂದು ಗುರುತಿಸಲಾಗಿದೆ. ಇಬ್ಬರೂ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಹರಿಪ್ರಸಾದ್ ಅವರು ಸುಬ್ರಹ್ಮಣ್ಯದಲ್ಲಿ ‘ಅನುಗ್ರಹ ಎಂಟರ್‌ಪ್ರೈಸಸ್’ ಎಂಬ ಹಾರ್ಡ್‌ವೇರ್ ಅಂಗಡಿಯ ಮಾಲೀಕರಾಗಿದ್ದರು, ಸುಜೀತ್ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ರವಿವಾರ ಮಧ್ಯಾಹ್ನ ಹರಿಪ್ರಸಾದ್ ಮತ್ತು ಸುಜೀತ್ ಅವರು ತಮ್ಮ ಪರಿಚಿತರಾದ ಸುಮಾರು 10 ಜನರ ತಂಡದೊಂದಿಗೆ ಕಾಲೋನಿ ಕೊನೆಯಲ್ಲಿರುವ ಕುಮಾರಧಾರ ನದಿಯ ಬಳಿ ವನಭೋಜನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕುಲ್ಕುಂದ ಬಳಿ ನದಿಯಲ್ಲಿ ಸ್ನಾನ ಮಾಡಲು ನೀರಿಗಿಳಿದಾಗ ಇಬ್ಬರೂ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ.
ಜೊತೆಯಲ್ಲಿದ್ದವರು ತಕ್ಷಣವೇ ಗಮನಿಸಿದರೂ ಫಲಕಾರಿಯಾಗಲಿಲ್ಲ ಎಂದು ಹೇಳಲಾಗುತ್ತಿದೆ. ಬಳಿಕ ನೀರಿನಲ್ಲಿ ಮುಳುಗಿದ್ದ ಇಬ್ಬರ ಮೃತದೇಹಗಳನ್ನು ಮೇಲೆತ್ತಲಾಗಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
































