ಉಡುಪಿ: ನಗರದ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಸೋಮವಾರ ಇ-ಮೇಲ್ ಮೂಲಕ ಬಾಂಬ್ ಸ್ಪೋಟದ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಪೊಲೀಸರು ಬಿಗು ತಪಾಸಣೆ ನಡೆಸಿದ್ದಾರೆ.
ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು, ಶಾಲಾ ಆವರಣದಲ್ಲಿ ತೀವ್ರ ತಪಾಸಣೆ ನಡೆಸಿದರು. ಸದ್ಯ ಯಾವುದೇ ಬಾಂಬ್ ಅಥವಾ ಅಪಾಯಕಾರಿ ಅಂಶ ಪತ್ತೆಯಾಗಿಲ್ಲ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ಶಾಲೆಯಲ್ಲಿ ಬಾಂಬ್ ಇಟ್ಟಿರೋ ಬಗ್ಗೆ ಇ-ಮೇಲ್ ಸ್ವೀಕೃತವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸರು ಇಡಿ ಶಾಲೆಯನ್ನು ಸುಪರ್ದಿಗೆ ಪಡೆದು Anti Sabotage Team, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲಿಸಲಾಗಿದ್ದು, ಯಾವುದೇ ರೀತಿಯ ಸ್ಪೋಟಕ ವಸ್ತುಗಳು ಕಂಡುಬಂದಿರುವುದಿಲ್ಲ. ಇದೊಂದು ಹುಸಿ ಇ-ಮೇಲ್ ಬೆದರಿಕೆ ಕರೆ ಆಗಿರುವುದರಿಂದ, ಇಡಿ ಶಾಲೆಯನ್ನು ಪರಿಶೀಲಿಸಿ, ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ
