ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಾದ ಬೇಲೂರು, ಹಳೇಬೀಡು ಮತ್ತು ಮೈಸೂರಿನ ಸೋಮನಾಥಪುರ ದೇವಾಲಯಗಳು ವಿಶ್ವಸಂಸ್ಥೆಯ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿವೆ. ಈ ದೇಗುಲಗಳಿಗೆ ವಿಶ್ವಸಂಸ್ಥೆ ಜಾಗತಿಕ ಹಿರಿಮೆ ನೀಡಿದೆ.
ಸೌದಿ ಅರೇಬಿಯಾ ದಲ್ಲಿ ನಡೆದ 45ನೇ ವಿಶ್ವ ಪಾರಂಪರಿಕ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 16ರಿಂದ ಸಭೆ ಆರಂಭವಾಗಿದ್ದು, ರವೀಂದ್ರನಾಥ ಠಾಗೋರ್ ಅವರು ಆರಂಭಿಸಿದ ಶಾಂತಿನಿಕೇತನವನ್ನು ಭಾನುವಾರವಷ್ಟೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿತ್ತು. ಇದೀಗ ಕರ್ನಾಟಕದ ಹೆಮ್ಮೆಯಾಗಿರುವ ಹೊಯ್ಸಳ ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಯನ್ನು ಸೇರಿವೆ.
ಭಾರತಕ್ಕೆ ಮತ್ತಷ್ಟು ಹೆಮ್ಮೆ ತರುವ ಹೊಯ್ಸಳರ ಭವ್ಯ ಮತ್ತು ಪವಿತ್ರ ಶಿಲ್ಪ ಸಂಕೀರ್ಣಗಳನ್ನು UNESCO ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೇ, ಸ್ಥಳಗಳ ಅಭಿವೃದ್ಧಿಗೆ ವಿಶ್ವ ಪಾರಂಪರಿಕ ನಿಧಿಯಿಂದ ನೆರವು ದೊರೆಯುತ್ತದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಆಯ್ಕೆ ಪಟ್ಟಿಗೆ ಈ ದೇಗುಲಗಳನ್ನು ಸೇರ್ಪಡೆಗೊಳಿಸಲಾಗಿತ್ತು. 2018ರಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್ಐ)ಗೆ ರಾಜ್ಯ ಸರ್ಕಾರವು ಈ ದೇಗುಲಗಳ ಸವಿಸ್ತಾರ ಮಾಹಿತಿ ನೀಡಿತ್ತು. 2022ರಲ್ಲಿ ಅಂತರಾಷ್ಟ್ರೀಯ ಪುರಾತನ ಸ್ಮಾರಕ ಮತ್ತು ಪ್ರದೇಶಗಳ ಸಮಿತಿಯು ಇಲ್ಲಿಗೆ ಭೇಟಿ ನೀಡಿದ್ದು, ಈ ದೇಗುಲಗಳ ಬಗ್ಗೆ ಯೂನೆಸ್ಕೊಗೆ ವರದಿ ನೀಡಿತ್ತು.