ಡಿಜಿಟಲ್ ಪೇಮೆಂಟ್ ಮತ್ತಷ್ಟು ಸರಳೀಕರಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಪ್ರಮುಖ ನಿರ್ಧಾರ ಕೈಗೊಂಡಿದೆ.
ಕೆಲವು ವಹಿವಾಟುಗಳಿಗೆ ಟ್ರಾನ್ಸಾಕ್ಷನ್ ಮಿತಿಯನ್ನು 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ 24 ಗಂಟೆಗಳಲ್ಲಿ 10 ಲಕ್ಷದವರೆಗೆ ಹಣ ಕಳುಹಿಸಬಹುದು. ಈ ಕುರಿತ ಮಾಹಿತಿ ಇಲ್ಲಿದೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ರೂಪಿಸಿರುವ ಹೊಸ ಯುಪಿಐ ವಹಿವಾಟುಗಳ ನಿಯಮಗಳು ಇಂದಿನಿಂದ ಜಾರಿಗೆ ಬರುತ್ತಿದ್ದು, ಸಾಮಾನ್ಯ ಜನರಿಗೆ ಹಾಗೂ ಯುಪಿಐ ಮೂಲಕ ವಹಿವಾಟು ನಡೆಸುವ ಅಂಗಡಿಯವರು / ವ್ಯಾಪಾರಿಗಳಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತವೆ.
ಯುಪಿಐ ಹೊಸ ನಿಯಮಗಳ ಪ್ರಕಾರ, ಒಬ್ಬ ಬಳಕೆದಾರ 24 ಗಂಟೆಗಳಲ್ಲಿ (ಒಂದು ದಿನದಲ್ಲಿ) 10 ಲಕ್ಷದವರೆಗೆ ವಹಿವಾಟು ಮಾಡಬಹುದು. ಆದರೆ, ಇದು ವಿಶೇಷ ದೃಢೀಕರಣ ಪಡೆದವರು ಮತ್ತು ವ್ಯಾಪಾರಸ್ಥರಿಗೆ ಅನ್ವಯಿಸುತ್ತದೆ. ಆದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯ ನಡುವೆ ನಡೆಯುವ ವಹಿವಾಟಿನ ಮಿತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಸ್ತುತ ಅವರು ದಿನಕ್ಕೆ 1 ಲಕ್ಷದವರೆಗೆ ಕಳುಹಿಸಬಹುದು. ಆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಗಮನಿಸಬೇಕು. ಆಯ್ದ ಕೆಲವು ಜನರಿಗೆ ಮಾತ್ರ 10 ಲಕ್ಷದವರೆಗೆ ಅವಕಾಶ ನೀಡಲಾಗಿದೆ.
ಬದಲಾದ ಪ್ರಮುಖ UPI ನಿಯಮಗಳು
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳು: ಪ್ರತಿ ವಹಿವಾಟಿನ ಮಿತಿ 5 ಲಕ್ಷ ರೂಪಾಯಿ, ದೈನಂದಿನ ಮಿತಿ 6 ಲಕ್ಷ ರೂಪಾಯಿಯವರೆಗೆ ಏರಿಕೆ ಮಾಡಲಾಗಿದೆ.ಸಾಲ ಮತ್ತು ಇಎಂಐ ಪಾವತಿ: ಪ್ರತಿ ವಹಿವಾಟಿಗೆ 5 ಲಕ್ಷ, ದೈನಂದಿನ ಮಿತಿ 10 ಲಕ್ಷ ರೂಪಾಯಿ ವರೆಗೆ ಏರಿಸಲಾಗಿದೆ.
ಬಂಡವಾಳ ಮಾರುಕಟ್ಟೆ ಹೂಡಿಕೆಗಳು ಮತ್ತು ವಿಮಾ ಪಾವತಿ: ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿ, ದೈನಂದಿನ ಮಿತಿ 10 ಲಕ್ಷಗಳು ಏರಿಕೆ ಮಾಡಲಾಗಿದೆ.
ಪ್ರಯಾಣ ಪಾವತಿಗಳು: ಪ್ರತಿ ವಹಿವಾಟಿನ ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂಪಾಯಿವರೆಗೆ ಹೆಚ್ಚಿಸಲಾಗಿದೆ.
ಸರ್ಕಾರಿ ಇ-ಮಾರುಕಟ್ಟೆ ಸ್ಥಳ (GeM) ಮತ್ತು ತೆರಿಗೆ ಪಾವತಿ: ಹಿಂದಿನ ಮಿತಿ 1 ಲಕ್ಷ ರೂಪಾಯಿ ಆಗಿತ್ತು. ಹೊಸ ನಿಯಮದ ಪ್ರಕಾರ ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.