ವಾಷಿಂಗ್ಟನ್: ಇರಾನ್‌ನ ಮೂರು ಅಣ್ವಸ್ತ್ರ ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಂದು ನ್ಯೂಕ್ಲಿಯರ್ ಬಾಂಬ್ ಕೂಡ ನಾಶವಾಗಿಲ್ಲ ಎಂದು ಈಗ ಸ್ವತಹ ಅಮೆರಿಕದ ಗುಪ್ತಚರ ಪಡೆಯೇ ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಂತೆ ಇರಾನ್‌ನ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮಾಣು ಯೋಜನೆ ನಾಶವಾಗಿಲ್ಲ ಬದಲಾಗಿ ಕೆಲವು ತಿಂಗಳ ಕಾಲ ಹಿನ್ನಡೆಯಾಗಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ.
ಈ ವರದಿ ಟ್ರಂಪ್‌ಗೆ ಭಾರಿ ಮುಖಭಂಗ ಉಂಟುಮಾಡಿದ್ದು, ಅವರು ತನ್ನದೇ ದೇಶದ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ನಿರಾಕರಿಸಿದ್ದಾರೆ. ಮೂರು ನ್ಯೂಕ್ಲಿಯರ್ ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಿಢೀರ್ ದಾಳಿಯಲ್ಲಿ ಇರಾನ್‌ನ ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ನಾಶ ಮಾಡಿರುವುದಾಗಿ ಅಮೆರಿಕ ಹೇಳಿಕೊಂಡಿತ್ತು. ಆದರೆ ನಾಶವಾಗಿಲ್ಲ ಎಂದು ರಕ್ಷಣಾ ಗುಪ್ತಚರ ಏಜೆನ್ಸಿಯ ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ದಾಳಿಯಲ್ಲಿ ರಹಸ್ಯ ಕಟ್ಟಡಗಳನ್ನು ನಾಶಪಡಿಸದೆ ಪರಮಾಣು ತಾಣಗಳ ಪ್ರವೇಶ ದ್ವಾರವನ್ನು ಮಾತ್ರ ನಾಶಪಡಿಸಲಾಗಿದೆ ಎಂದು ವರದಿಗಳು ಹೇಳಿವೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಈ ಮೌಲ್ಯಮಾಪನದ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ. ಆದರೆ ಅದು ಉನ್ನತ ರಹಸ್ಯವಾಗಿದೆ ಎಂದು ಹೇಳಿದ್ದಾರೆ.
30,000 ಪೌಂಡ್ ಬಾಂಬ್‌ಗಳನ್ನು ಹಾಕಿದಾಗ ಏನಾಗುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಇರಾನ್‌ನ ಎರಡು ಪರಮಾಣು ಘಟಕಗಳ ಮೇಲೆ ಯುಎಸ್ ಬಿ-2 ಬಾಂಬರ್‌ನಿಂದ ಬಾಂಬ್‌ಗಳನ್ನು ಹಾಕಲಾಗಿದೆ. ಜಲಾಂತರ್ಗಾಮಿ ನೌಕೆಯು ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳೊಂದಿಗೆ ಮೂರನೇ ಒಂದು ಭಾಗವನ್ನು ಹೊಡೆದಿದೆ ಎಂದು ಹೇಳಿ ಅಮೆರಿಕ ಸರ್ಕಾರ ಈ ವರದಿಯನ್ನು ತಳ್ಳಿಹಾಕಿದೆ.
ಇರಾನ್ ಪರಮಾಣು ತಾಣಗಳ ಮೇಲಿನ ದಾಳಿಯನ್ನು ಅದ್ಭುತ ಮಿಲಿಟರಿ ಯಶಸ್ಸು ಎಂದು ಕರೆದಿದ್ದ ಟ್ರಂಪ್, ಪರಮಾಣು ಸ್ಥಾವರಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದರು. ವಾಷಿಂಗ್ಟನ್ ಪಡೆಗಳು ಇರಾನ್ ಪರಮಾಣು ಕಾರ್ಯಕ್ರಮವನ್ನು ಧ್ವಂಸಗೊಳಿಸಿದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದರು.
ಯುರೇನಿಯಂ ಸುರಕ್ಷಿತವಾಗಿಟ್ಟ ಇರಾನ್
ಆದರೆ ಅಮೆರಿಕ ನಡೆಸಿದ ದಾಳಿಯ ಯಶಸ್ಸಿನ ಬಗ್ಗೆ ಆರಂಭದಿಂದಲೇ ಗುಮಾನಿಗಳು ಇದ್ದವು. ಈ ರೀತಿಯ ದಾಳಿ ನಡೆಯಬಹುದು ಎಂದು ಮೊದಲೇ ಅಂದಾಜಿಸಿದ್ದ ಇರಾನ್ ಸುಮಾರು 400 ಟನ್ ಯುರೇನಿಯಂ ಅನ್ನು ಮೊದಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಿತ್ತು ಎನ್ನಲಾಗುತ್ತಿದೆ. ದಾಳಿ ಮಾಡಿದ ಒಂದು ಸ್ಥಾವರದಲ್ಲಿ ದಾಳಿಗೂ ಮೊದಲೇ ವಾಹನಗಳು ಸಾಲುಗಟ್ಟಿ ನಿಂತಿರುವುದು, ಮತ್ತು ಚಟುವಟಿಕೆಗಳು ನಡೆಯುತ್ತಿರುವುದು ಸ್ಯಾಟಲೈಟ್ ಚಿತ್ರಗಳಲ್ಲಿ ಕಂಡು ಬಂದಿದೆ. ಇದು ಇರಾನ್ ಯುರೇನಿಯಂ ಅನ್ನು ಸ್ಥಳಾಂತರಿಸಿರುವುದನ್ನು ದೃಢಪಡಿಸಿದೆ. ಇದರ ಬೆನ್ನಿಗೆ ಅಮೆರಿಕದ ಗುಪ್ತಚರ ವರದಿ ಅಣ್ವಸ್ತ್ರ ನಾಶವಾಗಿಲ್ಲ ಎಂದು ಹೇಳಿರುವುದು ಬೆಟ್ಟ ಅಗೆದು ಇಲಿ ಹಿಡಿದಂತಾಯಿತೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಪರಮಾಣು ಯೋಜನೆಗಳಿಗೆ ತೊಂದರೆಯಾಗದಂತೆ ಕಾಪಾಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು ಎಂದು ಇರಾನ್ ಸರ್ಕಾರವೂ ಹೇಳಿಕೊಂಡಿದೆ. ಪರಮಾಣು ಘಟಕಗಳಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪರಮಾಣು ಉತ್ಪಾದನೆ ಮತ್ತು ಸೇವೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ನಮ್ಮ ಕಾರ್ಯತಂತ್ರವಾಗಿದೆ ಎಂದು ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಎಸ್ಲಾಮಿ ತಿಳಿಸಿದ್ದಾರೆ.