ಜೈಪುರ: ಪಿಕ್‌ಅಪ್ ವ್ಯಾನ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ದೌಸಾ ಎಂಬಲ್ಲಿ ಇಂದು ನಸುಕಿನ ಹೊತ್ತು ನಡೆದಿದೆ. ಪಿಕ್‌ಅಪ್ ವ್ಯಾನಿನಲ್ಲಿದ್ದವರು ಖತುಶ್ಯಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರಂತ ನಸುಕಿನ 3.30ರ ವೇಳೆಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 7-8 ಜನರನ್ನು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೌಸಾ ಜಿಲ್ಲಾಧಿಕಾರಿ ದೇವೇಂದ್ರ ಕುಮಾರ್, ಆರಂಭಿಕ ವರದಿಗಳ ಪ್ರಕಾರ, ಬಾಪಿ ಬಳಿ ಸಂಭವಿಸಿದ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. 9 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ದಿನದ ಹಿಂದಷ್ಟೇ ಪುಣೆಯಲ್ಲೂ ಇಂಥದ್ದೇ ಅಪಘಾತ ಸಂಭವಿಸಿತ್ತು. ಪುಣೆಯಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಖೇಡ್ ತಾಲ್ಲೂಕಿನ ಪೈಟ್ ಬಳಿಯ ಕುಂದೇಶ್ವರ ದೇವಸ್ಥಾನಕ್ಕೆ ಪಿಕ್‌ಅಪ್ ಟ್ರಕ್ ಮಧ್ಯಾಹ್ನ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಹತ್ತು ಮಹಿಳಾ ಭಕ್ತರು ಸಾವನ್ನಪ್ಪಿದ್ದರು. 27 ಮಂದಿ ಗಾಯಗೊಂಡಿದ್ದರು.
ಪೈಟ್ ಬಳಿಯ ಪಾಪಲ್ವಾಡಿಯಲ್ಲಿ 35 ಕ್ಕೂ ಹೆಚ್ಚು ಭಕ್ತರು ಪಿಕ್-ಅಪ್ ಟ್ರಕ್‌ನ ಹಿಂಭಾಗದ ಕಾರ್ಗೋ ಬೆಡ್ ಅನ್ನು ಹತ್ತಿದ್ದರು. ಕಡಿದಾದ ಇಳಿಜಾರಿನಲ್ಲಿ ವಾಹನವು ಹಿಂದಕ್ಕೆ ಜಾರಿ 30 ಅಡಿ ಕಂದಕಕ್ಕೆ ಬಿದ್ದಿತ್ತು. ಮೃತರನ್ನು ಮಂದಾಬಾಯಿ ದಾರೆಕರ್ (50), ಸನಾಬಾಯಿ ದಾರೆಕರ್ (50), ಮೀರಾಬಾಯಿ ಚೋರ್ಗೆ (50), ಶೋಭಾ ಪಾಪಲ್ (33), ಸುಮನ್ ಪಾಪಲ್ (50), ಶಕುಬಾಯಿ ಚೋರ್ಗೆ (50), ಶಾರದ ಚೋರ್ಗೆ (45), ಬಯಾದಬಾಯಿ ಚೋರ್ಗೆ (45), ಪಾರ್ವತಿಬಾಯಿ ಪಾಪಲ್ (56) ಮತ್ತು ಫಾಸಪ್ಪಾಲ್ (16) ಎಂದು ಗುರುತಿಸಲಾಗಿದೆ.