ಮಹಾರಾಷ್ಟ್ರ : ಯುಪಿಎಸ್‌ಸಿ ಪರೀಕ್ಷೆಯು ಭಾರತದಲ್ಲಿ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯ ಎಲ್ಲ ಅಡೆತಡೆಗಳನ್ನು ದಾಟಿ ಯಶಸ್ವಿಯಾಗಿ ಪೂರ್ಣಗೊಳಿಸಿದವರಲ್ಲಿ ಐಎಎಸ್ ಅಧಿಕಾರಿ ವರುಣ್ ಬರನ್ವಾಲ್ ಅವರು ಕೂಡ ಒಬ್ಬರು.
ಮಹಾರಾಷ್ಟ್ರದ ಪಾಲಘರ್ ಜಿಲ್ಲೆಯ ಬೋಯಸರ್ ಎಂಬ ಪುಟ್ಟ ಪಟ್ಟಣದಿಂದ ಬಂದ ವರುಣ್ ಆರಂಭದಲ್ಲಿ ವೈದ್ಯರಾಗುವ ಕನಸು ಕಂಡಿದ್ದರು. ವರುಣ್ ಅವರ ತಂದೆ ಒಬ್ಬ ಸೈಕಲ್ ರಿಪೇರಿ ಮೆಕಾನಿಕ್. ಕುಟುಂಬದ ಏಕೈಕ ಆಧಾರವಾಗಿದ್ದ ಚಿಕ್ಕ ರಿಪೇರಿ ಅಂಗಡಿಯನ್ನು ಅವರು ನಡೆಸುತ್ತಿದ್ದರು. ದುರದೃಷ್ಟವಶಾತ್, 2006 ರಲ್ಲಿ ವರುಣ್ ತಮ್ಮ ತಂದೆಯನ್ನು ಕಳೆದುಕೊಂಡರು. ಇದರಿಂದಾಗಿ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಯಿತು.
ತಂದೆಯ ಸಾವಿನ ಬಳಿಕ ಕುಟುಂಬವನ್ನು ನಡೆಸುವ ಜವಾಬ್ದಾರಿಯನ್ನು ವರುಣ್ ವಹಿಸಿಕೊಂಡರು. ವರುಣ್ ಚಿಕ್ಕ ವಯಸ್ಸಿನಲ್ಲಿಯೇ ಅಂಗಡಿಯನ್ನು ನಿರ್ವಹಿಸಲು ಪ್ರಾರಂಭಿಸಿದರು. ಈ ಎಲ್ಲಾ ಸವಾಲುಗಳ ಹೊರತಾಗಿಯೂ, ವರುಣ್ ಅವರು ಶೈಕ್ಷಣಿಕವಾಗಿ ಹಿಂದುಳಿಯಲಿಲ್ಲ. ಅವರು 10 ನೇ ತರಗತಿ ಪರೀಕ್ಷೆಯಲ್ಲಿ ತಮ್ಮ ತರಗತಿಗೆ ಟಾಪ್ ಬಂದರು.
ವರುಣ್ ಅವರಿಗೆ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ನೆರವಾದವರು ಅವರ ತಂದೆಯ ಸ್ನೇಹಿತರಾದ ಡಾ. ಕಂಪ್ಲಿ ಅವರು. ಡಾ. ಕಂಪ್ಲಿ ಅವರು ವರುಣ್ ಅವರ ತಂದೆ ನಿಧನಕ್ಕೂ ಮುನ್ನ ವೈದ್ಯಕೀಯ ಚಿಕಿತ್ಸೆ ನೀಡಿದ್ದರು. ಜೊತೆಗೆ ವರುಣ್ ಅವರ ಮಾರ್ಗದರ್ಶಿಯಾಗಿದ್ದರು. ಡಾ. ಕಂಪ್ಲಿ ಅವರು ವರುಣ್ ಅವರಿಗೆ ಆರ್ಥಿಕವಾಗಿ ನೆರವು ನೀಡಿದರು. ಅವರ ಆರಂಭಿಕ ಕಾಲೇಜು ಶುಲ್ಕ ಭರಿಸಲು ಸಹಾಯ ಮಾಡಿದರು. ನಂತರ ವರುಣ್ ಅವರ ಐಎಎಸ್ ಅಧಿಕಾರಿಯಾಗುವ ಕನಸಿಗೆ ಪ್ರೋತ್ಸಾಹ ನೀಡಿದರು.
ಶಾಲೆ ಮುಗಿಸಿದ ನಂತರ, ವರುಣ್ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ವೈದ್ಯಕೀಯ ಕಾಲೇಜಿಗೆ ಸೇರಿದರು. ಆದರೆ ವೈದ್ಯಕೀಯ ಕಾಲೇಜಿನ ಹೆಚ್ಚಿನ ವೆಚ್ಚದಿಂದಾಗಿ ಅವರಿಗೆ ಶಿಕ್ಷಣ ಮುಂದುವರಿಯಲು ಕಷ್ಟವಾಯಿತು. ಹೀಗಾಗಿ ಅವರು ಇಂಜಿನಿಯರಿಂಗ್ ಕ್ಷೇತ್ರವನ್ನು ಆರಿಸಿಕೊಂಡರು.
ಬಳಿಕ ಯುಪಿಎಸ್‌ಸಿ ಬರೆದ ವರುಣ್ ಅವರು ಪರೀಕ್ಷೆಯಲ್ಲಿ ಉತ್ತೀರ್ಣವಾಗುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.