ಉತ್ತರ ಪ್ರದೇಶ : ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಸಫಲರಾಗುತ್ತಾರೆ. ಹೀಗೆ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವಲ್ಲಿ ಸಫಲರಾದ ವಿದೂಷಿ ಸಿಂಗ್ ಯವರ ಯಶೋಗಾಥೆ ಇದು.
ಉತ್ತರ ಪ್ರದೇಶದ ಅಯೋಧ್ಯಾದವರಾದ ವಿದೂಷಿ ಸಿಂಗ್, ರಾಜಸ್ಥಾನದ ಜೋಧ್ಪುರದಲ್ಲಿ ಜನಿಸಿದರು. 2021 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.
ಬಳಿಕ ವಿದೂಷಿ ಸಿಂಗ್ 2022ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಅವರು ಐಚ್ಛಿಕ ವಿಷಯವಾಗಿ ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲ ಪ್ರಯತ್ನದಲ್ಲಿ 13ನೇ ರ್ಯಾಂಕ್ ಗಳಿಸುತ್ತಾರೆ. ವಿದೂಷಿ ಅವರು ತಮ್ಮ 21ನೇ ವಯಸ್ಸಿನಲ್ಲಿ ಯಾವುದೇ ತರಬೇತಿ ತೆಗೆದುಕೊಳ್ಳದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.
ಯುಪಿಎಸ್ಸಿ ಅಭ್ಯರ್ಥಿಗಳು ಐಎಎಸ್ ಅಧಿಕಾರಿಯಾಗಲು ಬಯಸಿದರೆ, ವಿದೂಷಿ ಅವರು ಐಎಎಸ್ ಹುದ್ದೆಯನ್ನು ತಿರಸ್ಕರಿಸಿ, ಐಎಫ್ಎಸ್ ಅನ್ನು ಆಯ್ಕೆ ಮಾಡುತ್ತಾರೆ. ಅವರು ಈ ನಿರ್ಧಾರವನ್ನು ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಬೇಕೆಂಬ ತಮ್ಮ ಅಜ್ಜನ ಆಕಾಂಕ್ಷೆಯನ್ನು ಈಡೇರಿಸಲು ತೆಗೆದುಕೊಳ್ಳುತ್ತಾರೆ.
ವಿದೂಷಿ ಅವರು ಪ್ರಸ್ತುತ ಪ್ಯಾರಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮೂರನೇ ಕಾರ್ಯದರ್ಶಿ (ಎಲ್ಟಿ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.