ಬೆಂಗಳೂರು : ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರದ ಧೋರಣೆಯೇ ಕಾರಣ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಕೆಚ್ಚಲು ಕೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ತಂಡವು ಇಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮಾಲೀಕನ ಮನೆಗೆ ಭೇಟಿ ನೀಡಿತು. ಅಲ್ಲದೇ ಗೋಪೂಜೆಯನ್ನೂ ನೆರವೇರಿಸಿ ದನದ ಮಾಲೀಕನಿಗೆ ಧೈರ್ಯ ತುಂಬಿತು.ಗೋಪೂಜೆ ಮಾಡುವ ಈ ನಾಡಿನಲ್ಲಿ, ದೇಶದಲ್ಲಿ ಈ ದುರ್ಘಟನೆ ನಡೆದಿರುವುದು ಅಕ್ಷಮ್ಯ ಅಪರಾಧ ಎಂದು ವಿಜಯೇಂದ್ರ ಅವರು ಖಂಡಿಸಿದರು.
ಈ ದುರ್ಘಟನೆ ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಸರಕಾರಕ್ಕೆ ಒಳ್ಳೆಯದು ಮಾಡುವುದಿಲ್ಲ ಎಂದು ಅವರು ಎಚ್ಚರಿಸಿದರು. ಇವರ ಪಾಪದ ಕೊಡ ತುಂಬಿದೆ. ಆದ್ದರಿಂದ ಇಂಥ ದುರ್ಘಟನೆ ಆಗುತ್ತಿದೆ ಎಂದು ಅವರು ತಿಳಿಸಿದರು.
ಯಾರೋ ಬಡಪಾಯಿಯನ್ನು ತಂದು ಅವನೇ ಮಾಡಿದ್ದಾಗಿ ಬಿಂಬಿಸುವ ಪ್ರಯತ್ನ ಆಗುತ್ತಿದೆ ಎಂದು ಚರ್ಚೆ ನಡೆದಿದೆ. ಬಡ ಕುಟುಂಬದಿಂದ ಬಂದ ಹಸುವಿನ ಮಾಲೀಕರು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಭೇಟಿ ಮಾಡಿ, ಗೋಪೂಜೆ ಮಾಡಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಸರಕಾರವು ಹಿಂದೂಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು. ಹಿಂದೂ- ಮುಸ್ಲಿಂ ಸಮುದಾಯಕ್ಕೆ ಬೇರೆ ಬೇರೆ ನೀತಿ ಅನುಸರಿಸಿ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.