ಬೆಂಗಳೂರು :ವಿಜಯೇಂದ್ರನನ್ನು ಬದಲಾವಣೆ ಮಾಡಬಹುದು ಎಂಬ ಭ್ರಮೆಯಲ್ಲಿ ಇರುವವರಿಗೆ ಒಳ್ಳೆಯ ಸುದ್ದಿ ಬರಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸದಿಂದ ನುಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ‘ನಾನು ಮಾಡುತ್ತಿರುವ ಪ್ರಯತ್ನದ ಬಗ್ಗೆ ಪಕ್ಷದ ವರಿಷ್ಠರಿಗೆ ಸಮಾಧಾನ ಇದೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರ ಮಗನಾಗಿರುವುದೇ ಅಪರಾಧ ಎಂಬ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದು, ಬರುವಂಥ ದಿನಗಳಲ್ಲಿ ಉತ್ತರ ಕೊಡುತ್ತೇನೆ’ ಎಂದು ತಿಳಿಸಿದರು.
ಯತ್ನಾಳರನ್ನು ಉಚ್ಚಾಟನೆ ಮಾಡುವಂತೆ ದೆಹಲಿಗೆ ತೆರಳಿ ದೂರು ಕೊಡುತ್ತಿಲ್ಲ; ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ದಿನನಿತ್ಯ ಹಾದಿಯಲ್ಲಿ ಬೀದಿಯಲ್ಲಿ ಮಾತನಾಡುತ್ತಿದ್ದು, ಪತ್ರಿಕೆಗಳಲ್ಲೂ ಬರುತ್ತಿದೆ. ಅವರದೇ ಆದ ರೀತಿಯಲ್ಲಿ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಇದೇ ರೀತಿ ಮುಂದುವರೆದರೆ ಹೇಗೆ ಎಂದು ಕೇಳಿದಾಗ, ‘ಬಹಳ ದಿನ ಮುಂದುವರೆಯುತ್ತದೆ ಎಂದು ನನಗೇನೂ ಅನಿಸುತ್ತಿಲ್ಲ’ ಎಂದು ಉತ್ತರಿಸಿದರು.
ದೆಹಲಿಯಲ್ಲಿ ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮೊನ್ನೆ ನಡೆದ ಉಪ ಚುನಾವಣೆಗಳ ಫಲಿತಾಂಶ, ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಗಮನಕ್ಕೆ ತಂದಿದ್ದೇನೆ. ಕಾರ್ಯಕರ್ತರು ಸಾಕಷ್ಟು ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ದಿನಬೆಳಗಾದರೆ ಯಡಿಯೂರಪ್ಪರನ್ನು ಟೀಕಿಸುವುದು, ರಾಜ್ಯದ ಅಧ್ಯಕ್ಷರ ಬಗ್ಗೆ ಟೀಕಿಸುವುದು ನಡೆದಿದ್ದು, ಕಾರ್ಯಕರ್ತರಂತೂ ಸಾಕಷ್ಟು ಬೇಸತ್ತಿದ್ದಾರೆ ಎಂದು ತಿಳಿಸಿದರು.
ಈ ನಡವಳಿಕೆಯಿಂದ ಅವರು ಎತ್ತರಕ್ಕೆ ಬೆಳೆಯುವ ಭ್ರಮೆಯಲ್ಲಿದ್ದರೆ ಖಂಡಿತ ಅದು ಸಾಧ್ಯವಿಲ್ಲ. ಕಾರ್ಯಕರ್ತರು ಕೂಡ ಹಿಡಿಶಾಪ ಹಾಕುತ್ತಿದ್ದಾರೆ. ಇದೆಲ್ಲಕ್ಕೂ ಇತಿಶ್ರೀ ಹಾಕಬೇಕೆಂಬ ಅಪೇಕ್ಷೆ ಕಾರ್ಯಕರ್ತರಲ್ಲೂ ಇದೆ. ಯಾರ ಗಮನಕ್ಕೆ ತರಬೇಕೋ ಅದನ್ನು ತಂದಿದ್ದೇನೆ. ನಾನು (ವಿಜಯೇಂದ್ರ) ಏನೂ ಮಾತನಾಡುತ್ತಿಲ್ಲ ಎಂದರೆ, ಅದು ನಮ್ಮ ಅಸಮರ್ಥತೆ ಅಂದುಕೊಂಡರೆ ತಪ್ಪಾಗುತ್ತದೆ ಎಂದು ಹೇಳಿದರು.