ಮೈಸೂರು: ಅಲ್ಪಸಂಖ್ಯಾತ ದೇಶದ್ರೋಹಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿಲ್ಲ; ಹಾಗಾಗಿ ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ರಾಜ್ಯದ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಸರಕಾರದ ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ದೂರಿದರು. ಗುಲ್ಬರ್ಗದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕಡಿದು ಹಾಕಿದ್ದಾರೆ. ಬೀದರ್‍ನಲ್ಲೂ ಎಟಿಎಂ ದರೋಡೆ ನಡೆದಿದೆ ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮತ್ತೊಂದೆಡೆ ಭ್ರಷ್ಟಾಚಾರವೂ ತೀವ್ರವಾಗಿದೆ. ಗುಲ್ಬರ್ಗದಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ನಡೆದಿದೆ. ಬಳಿಕ ಪೊಲೀಸ್ ಗೂಂಡಾಗರ್ದಿ ನಡೆದಿದೆ. ದೂರು ನೀಡಲು ಹೋದ ಗುತ್ತಿಗೆದಾರನ ಸಹೋದರಿಯರ ಜೊತೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ತಿಳಿದೇಇದೆ. ಬಿಜೆಪಿ ಹೋರಾಟ ಮಾಡಿದ್ದರಿಂದ ಕಾಂಗ್ರೆಸ್ ಪುಡಾರಿಯನ್ನು ಬಂಧಿಸಿ ರಾಜಾತಿಥ್ಯ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರ ಸರಕಾರವು ಅಭಿವೃದ್ಧಿ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ; ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಜಿಲ್ಲೆಗೆ ಆದ್ಯತೆ ಕೊಟ್ಟಿದ್ದರು. ಸರ್ವತೋಮುಖ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದರು ಎಂದು ಗಮನ ಸೆಳೆದರು. ಸಿದ್ದರಾಮಯ್ಯನವರು ಈ ಜಿಲ್ಲೆಗೆ ಎಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಕೇಳಿದರು.
ಸಿದ್ದರಾಮಯ್ಯನವರು ಅವಧಿ ಪೂರ್ಣಗೊಳಿಸಲು ಸಾಧ್ಯವಿಲ್ಲ
ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಅವರ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ; ಕಾಂಗ್ರೆಸ್ಸಿನಲ್ಲಿ ಯುದ್ಧ ಪ್ರಾರಂಭವಾಗಿ 15 ದಿನಗಳಾಗಿವೆ. ಯಾರ್ಯಾರು ಬಡಿಗೆ, ಯಾರ್ಯಾರು ಕುಡುಗೋಲು ತೆಗೆದುಕೊಂಡು ಬರುತ್ತಾರೆ? ಇದು ಗೊತ್ತಾಗಲಿದೆ. ಸಿಎಂ ಸ್ಥಾನದ ಕುರಿತ ಬೀದಿರಂಪವು ಮುಂದುವರೆದಿದೆ. ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಇಳಿಯುವುದಿಲ್ಲ ಎಂದರೆ, ಡಿಕೆ ಶಿವಕುಮಾರ್ ತಾವು ಸಿಎಂ ಆಗಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇದು ಯಾವ ತಿರುವನ್ನು ಪಡೆಯಲಿದೆ ಎಂದು ಕಾದುನೋಡಿ ಎಂದು ವಿಜಯೇಂದ್ರ ಅವರು ಪ್ರಶ್ನೆಗೆ ಉತ್ತರ ನೀಡಿದರು.