ಪುಟ್ಟ ಕಂದಮ್ಮಗಳ ಜೊತೆ ತುಸು ಘಳಿಗೆ ಇದ್ದರೂ ಸಿಗುವ ಖುಷಿಯೇ ಬೇರೆ. ಮುಗ್ಧ ಮನಸ್ಸುಗಳು ನಿಸ್ವಾರ್ಥದಿಂದ ಆಡುವ ಪ್ರತಿಯೊಂದು ತೊದಲು ಮಾತನ್ನು ಕೇಳುವಾಗ ಕಿವಿಗೆ ಇಂಪೆನಿಸುತ್ತದೆ. ಮಕ್ಕಳ ಮುದ್ದಾದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ತಾಯಿಯೊಂದಿಗೆ ಎಂಟು ತಿಂಗಳ ಮಗುವೊಂದು ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಿಸಿದ್ದು, ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಅರ್ಜುನನ ಪುತ್ರ ಅಭಿಮನ್ಯು ತಾಯಿಯ ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವ ಕಲೆಯನ್ನು ತಂದೆಯಿಂದ ಕಲಿತಿರುತ್ತಾನೆ. ಅಂತೆಯೇ ಈ ಮಗು ತಾಯಿಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಕಲಿತಿದೆ ಎನ್ನುವ ಸಾಲುಗಳೊಂದಿಗೆ ಈ ವಿಡಿಯೋವನ್ನು Vaidik Gyaan ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಶ್ರೀ ಕೃಷ್ಣ ದಾಮೋದರಾಷ್ಟಕಂ ಶ್ಲೋಕ ಪಠಿಸುತ್ತಿರುವಾಗ ಅದರ ಕೊನೆಯ ಪದವನ್ನು ಮಗುವು ಮುದ್ದಾಗಿ ಉಚ್ಚರಿಸುತ್ತಿದೆ.
ಸಮಾಜಿಕ ಜಾಲತಾಣದಲ್ಲಿ ಅಧಿಕ ವೀಕ್ಷಣೆ ಕಂಡಿದ್ದು. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮಗುವಿನ ಈ ಆಧ್ಯಾತ್ಮಕ ಸಾಧನೆಯನ್ನು ಒಬ್ಬರು ಹೊಗಳಿದ್ದಾರೆ. ಮತ್ತೊಬ್ಬರು, ಜೈ ಸನಾತನ ಧರ್ಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಮಗುವಿನ ಬಾಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಣ ಕೇಳುವುದೇ ಕಿವಿಗೆ ಇಂಪು’ ಎಂದಿದ್ದಾರೆ.