ಮುಂಬೈ : ವಿದೇಶಿ ಸರಣಿಗಳ ಪ್ರವಾಸದ ವೇಳೆ ನಿಗದಿತ ಸಮಯದವರೆಗೆ ಮಾತ್ರ ಕುಟುಂಬಸ್ಥರು ಜೊತೆಯಲ್ಲಿರಬಹುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟು ನಿಟ್ಟಿನ ನಿಯಮ ವಿಧಿಸಿತ್ತು. ಈ ನಿಯಮದ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಸಿಸಿಐ ಈ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ.
ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಹೀನಾಯ ಸೋಲಿನ ಬಳಿಕ ಬಿಸಿಸಿಐ ಎಲ್ಲಾ ಆಟಗಾರರಿಗೆ ಕಟ್ಟುನಿಟ್ಟಿನ ಪ್ರಯಾಣ ನೀತಿಯನ್ನು ಹೊರಡಿಸಿತ್ತು. ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರ ಕುಟುಂಬಗಳ ಉಪಸ್ಥಿತಿಯನ್ನು ಬಿಸಿಸಿಐ ಗಣನೀಯವಾಗಿ ಕಡಿಮೆ ಮಾಡಿತ್ತು. ಸರಣಿಗಳ ವೇಳೆ ಆಟಗಾರರು ತಮ್ಮ ಹೆಂಡತಿಯರು, ಮಕ್ಕಳು ಅಥವಾ ಕುಟುಂಬವನ್ನು ಕೇವಲ ಎರಡು ವಾರಗಳವರೆಗೆ ಮಾತ್ರ ಜತೆಯಲ್ಲಿರಿಸಬಹುದು ಎಂದು ಬಿಸಿಸಿಐ ಹೊಸ ನಿಯಮ ವಿಧಿಸಿತ್ತು.
ಆದರೆ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಬಿಸಿಸಿಐನ ಈ ಹೊಸ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ದೊಡ್ಡ ಪಂದ್ಯಗಳ ವೇಳೆ ಅಥವಾ ಕೆಟ್ಟ ಸಮಯದಲ್ಲಿ ಆಟಗಾರರ ಕುಟುಂಬಗಳು ಜೊತೆಗಿರುವುದರಿಂದ ಉದ್ವೇಗ ಕಡಿಮೆಯಾಗುತ್ತದೆ. ಹೀಗಾಗಿ ಕುಟುಂಬಸ್ಥರು ಜೊತೆಗಿರಬೇಕಿರುವುದು ಅನಿವಾರ್ಯ ಎಂದು ಕೊಹ್ಲಿ ತಿಳಿಸಿದ್ದರು.
ವಿರಾಟ್ ಕೊಹ್ಲಿಯ ಈ ಹೇಳಿಕೆ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರಿಗೆ ವಿಧಿಸಿದ್ದ ಕಟ್ಟು ನಿಟ್ಟಿನ ನಿಯಮವನ್ನು ಮರುಪರಿಶೀಲಿಸಲು ಬಿಸಿಸಿಐ ಚಿಂತನೆ ನಡೆಸಿದೆ. ವಿದೇಶ ಪ್ರವಾಸದ ಸಮಯದಲ್ಲಿ ಆಟಗಾರರು ತಮ್ಮ ಕುಟುಂಬಗಳೊಂದಿಗೆ ವಿಸ್ತೃತ ಅವಧಿವರೆಗೆ ಇರಲು ಬಯಸಿದರೆ, ಅವರು ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.