ಧರ್ಮಸ್ಥಳದ ನೂರಾರು ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದು, ಈ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಅಧಾರ ರಹಿತವಾಗಿದೆ ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ವ್ಯಾಪಕ ಪ್ರತಿಕ್ರಿಯೆಗಳು ಹರಿದಾಡುತ್ತಿದೆ. ಈಗಾಗಲೇ ಸರ್ಕಾರ ಈ ವಿಚಾರದ ಬಗ್ಗೆ ತನಿಖೆ ಮಾಡಲು ಎಸ್.ಐಟಿ ಎನ್ನುವಂತಹ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ನಾವೆಲ್ಲರೂ ಈ ತನಿಖೆಯನ್ನು ಸ್ವಾಗತಿಸಿ, ಸಂಪೂರ್ಣವಾಗಿ ಬೆಂಬಲವನ್ನು ಕೂಡ ನೀಡುತ್ತೇವೆ. ಸತ್ಯ ಅನ್ನುವುದು ಶೀಘ್ರವೇ ಹೊರಬರಲಿ ಎಂದು ಪಿಟಿಐ ವಾರ್ತಾ ವಾಹಿನಿಗೆ ಮಾಹಿತಿ ನೀಡಿದರು.
ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳ ದಾರಿ ತಪ್ಪಿಸುವ ಕೆಲಸವಾಗುತ್ತಿದ್ದು, ಇದಕ್ಕಾಗಿಯೇ ಅಪಪ್ರಚಾರ ಎಸಗಿದ್ದಾರೆ. ಇದರಿಂದಾಗಿ ನಮಗೆಲ್ಲಾ ತೀವ್ರವಾದ ನೋವಾಗಿದ್ದು, ಎಸ್ ಐಟಿ ತನಿಖೆಯ ಸಲುವಾಗಿ ನಮ್ಮಲ್ಲಿರುವ ದಾಖಲೆಗಳನ್ನು ಮುಕ್ತವಾಗಿ ಕೊಟ್ಟಿದ್ದೇವೆ. ಆದಷ್ಟು ಬೇಗ ಈ ಸುಳ್ಳು ಸುದ್ದಿಯ ಬಗ್ಗೆ ತನಿಖೆ ಸಂಪೂರ್ಣಗೊಂಡು ಸತ್ಯ ಎಲ್ಲರಿಗೂ ತಿಳಿಯಲಿ ಎಂದು ಹೇಳಿದರು.