ಚಿತ್ರದುರ್ಗ: ಚಿತ್ರದುರ್ಗ ನಗರದ ಮೇಗಲಹಳ್ಳಿ ಬಳಿ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ನಗರ ಆಶ್ರಯ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಶುಕ್ರವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಶೀಘ್ರ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಚಿತ್ರದುರ್ಗ ನಗರದ ಮೇಗಲಹಳ್ಳಿ ರಿ. ಸರ್ವೆ ನಂ. 22 ರಲ್ಲಿನ 15 ಎಕರೆ 20 ಗುಂಟೆ ಜಮೀನಿನಲ್ಲಿ 1001 ಸಂಖ್ಯೆಯ ಜಿ+2 ಮಾದರಿಯ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿಗೆ ವೇಗ ನೀಡಿ, ಆದಷ್ಟು ಶೀಘ್ರ ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಈಗಾಗಲೆ 714 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎ.ಹೆಚ್.ಪಿ ಯೋಜನೆಯಡಿ 2022ನೇ ಸಾಲಿನಲ್ಲಿ ಗುತ್ತಿಗೆಗೆದಾರರಿಗೆ ಮನೆ ನಿರ್ಮಾಣ ಕೆಲಸದ ಆದೇಶ ನೀಡಲಾಗಿರುತ್ತದೆ. ಆದರೆ ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2026 ರ ಮಾರ್ಚ್ ಅಂತ್ಯದ ಒಳಗಾಗಿ ಎಲ್ಲ 1001 ಮನೆಗಳನ್ನು ಪೂರ್ಣಗೊಳಿಸುವುದಾಗಿ ಇದೇ ವೇಳೆ ಗುತ್ತಿಗೆದಾರರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಎಂ. ರೇಣುಕಾ, ಗುತ್ತಿಗೆದಾರರು, ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.